ರಾಷ್ಟ್ರೀಯ ಶಿಕ್ಷಣ ನೀತಿಗೆ ಸಿಎಫ್ ಐನಿಂದ ವಿರೋಧ: ವಿವಿ ಆವರಣದಲ್ಲಿ ಚಾಲನೆ ನೀಡುತ್ತಿದ್ದಂತೆ ಪ್ರತಿಭಟನೆ
ಕೊಣಾಜೆ ವಿವಿಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ ನೀಡುತ್ತಿದ್ದಂತೆಯೇ ಕ್ಯಾಂಪಸ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ವಿವಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಮಂಗಳಾ ಸಭಾಂಗಣದ ಹೊರಾಂಗಣದಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು ಧಿಕ್ಕಾರ ಘೋಷಣೆ ಕೂಗಿದ್ದಾರೆ. ತಕ್ಷಣ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಸಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಮಂಗಳಾ ಸಭಾಂಗಣದ ಸುತ್ತಮುತ್ತ ರಸ್ತೆಯನ್ನು ತಡೆದು ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಿದ್ದರು. ಹಾಗಿದ್ದರೂ ಪೊಲೀಸರ ಕಣ್ತಪ್ಪಿಸಿ ಸಭಾಂಗಣದ ಮುಂದೆ ಜಮಾಯಿಸಿದ ಸಿಎಫ್ಐ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿ ಬಂಧನಕ್ಕೊಳಗಾಗಿದ್ದಾರೆ.