ಮಂಗಳೂರು: ಭಾರತೀಯ ಜೈನ್ ಮಿಲನ್ ಮಂಗಳೂರು, ಜೈನ್ ಸೊಸೈಟಿ (ರಿ.) ಮಂಗಳೂರು ಹಾಗೂ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಂಗಳೂರಿನ ಜೈನ್ ಬೋರ್ಡಿಂಗ್ನ ವರ್ಧಮಾನ ಸಿದ್ಧಾರ್ಥ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವು ಸ್ವಾಗತ ಹಾಗೂ ನಮೋಕಾರ ಮಹಾಮಂತ್ರ ಪಠಣದೊಂದಿಗೆ ಆರಂಭಗೊಂಡಿತು. ಬಳಿಕ ಅತಿಥಿಗಳ ಪರಿಚಯ ನಡೆದು, ಗಣ್ಯರಿಂದ ದೀಪ ಪ್ರಜ್ವಲನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಕಿಟೆಕ್ಟ್ ಶ್ರೀ ರಾಜಶೇಖರ್ ಬಳ್ಳಾಲ್, ಜೈನ್ ಸೊಸೈಟಿ (ರಿ.) ಮಂಗಳೂರು ಅಧ್ಯಕ್ಷ ಶ್ರೀ ಪುಷ್ಪರಾಜ್ ಜೈನ್, ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಮಂಗಳೂರು ಕಾರ್ಯದರ್ಶಿ ಡಾ. ಸಿ.ಕೆ. ಬಳ್ಳಾಲ್, ಭಾರತೀಯ ಜೈನ್ ಮಿಲನ್ ಮಂಗಳೂರು ಅಧ್ಯಕ್ಷ ಶ್ರೀ ಸಚಿನ್ ಕುಮಾರ್ ಹಾಗೂ ಕಾರ್ಯದರ್ಶಿ ಶ್ರೀ ಅಕ್ಷಯ ಕುಮಾರ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿದ್ದ ಶ್ರೀ ರಾಜಶೇಖರ್ ಬಳ್ಳಾಲ್ ಅವರು ಯೋಗಾಭ್ಯಾಸ ನಡೆಸಿಕೊಟ್ಟು, ಯೋಗ ಮತ್ತು ಪ್ರಾಣಾಯಾಮದ ಮಹತ್ವದ ಕುರಿತು ಮಾತನಾಡಿದರು. ಯೋಗ ಹಾಗೂ ಪ್ರಾಣಾಯಾಮವು ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ದೀರ್ಘಾಯುಷ್ಯಕ್ಕೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ವಿವಿಧ ಪ್ರಾಣಾಯಾಮಗಳ ಅಭ್ಯಾಸ, ದೇಹದ ಅಂಗಾಂಗಗಳಿಗೆ ಸಂಬಂಧಿಸಿದ ವ್ಯಾಯಾಮ, ಧ್ಯಾನ, ಸೂರ್ಯ ನಮಸ್ಕಾರ ಹಾಗೂ ಸಮೂಹ ಯೋಗಾಭ್ಯಾಸ ನಡೆಯಿತು. ಉಸಿರಾಟದ ಸರಿಯಾದ ಕ್ರಮ ಮತ್ತು ಅದರ ಆರೋಗ್ಯಕರ ಪ್ರಯೋಜನಗಳ ಬಗ್ಗೆಯೂ ವಿವರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಅಕ್ಷಯ ಕುಮಾರ್ ನಿರೂಪಿಸಿದರು. ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಚಹಾ ಹಾಗೂ ಬಿಸ್ಕತ್ ವಿತರಿಸಲಾಯಿತು.


