ಇಂದಿನ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ರದ್ದು

- ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟವು ಕೇಂದ್ರ ಸರ್ಕಾರದ ಸಂಧಾನದ ಬಳಿಕ ನವೆಂಬರ್ 19ರ ಇಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಹಿಂತೆಗೆದುಕೊಂಡಿದೆ. ಉದ್ಯೋಗ ಕಡಿತ, ಏಕಪಕ್ಷೀಯ ವರ್ಗಾವಣೆ, ಹೊರಗುತ್ತಿಗೆ, ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮತ್ತು ಬ್ಯಾಂಕಿಂಗ್ ಸಂಘಟನೆಗಳ ಪದಾಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಸೆಂಟ್ರಲ್ ಬ್ಯಾಂಕ್ ಮುಂತಾದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಸಿಬ್ಬಂದಿ ಶನಿವಾರ ಮುಷ್ಕರ ನಡೆಸಲು ತೀರ್ಮಾನಿಸಿದ್ದರು.ಇನ್ನು ಶುಕ್ರವಾರ ಸಂಜೆ ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಬ್ಯಾಂಕ್ ಸಂಘಟನೆಗಳ ಪದಾಧಿಕಾರಿಗಳ ಜೊತೆಗೆ ಮಾತುಕತೆ ನಡೆದಿದ್ದು, ಮುಷ್ಕರವನ್ನು ಮುಂದೂಡುವ ತೀರ್ಮಾನಕ್ಕೆ ಬರಲಾಗಿದೆ.ಸಮಸ್ಯೆ ಬಗೆಹರಿಸಲು ಐಬಿಎ ಮತ್ತು ಎಐಬಿಇಎ ನಡುವೆ ಬುಧವಾರ ಸಭೆ ನಡೆದಿದ್ದರೂ ಯಾವುದೇ ಪರಿಹಾರ ಸಿಗಲಿಲ್ಲ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕೂಡ ಬ್ಯಾಂಕ್ ಮುಷ್ಕರಕ್ಕೆ ಬೆಂಬಲವನ್ನು ನೀಡಿದ್ದು, ದ್ವಿಪಕ್ಷೀಯತೆ ಮತ್ತು ಪರಸ್ಪರ ಚರ್ಚೆಯ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಬದ್ಧವಾಗಿದೆ ಎಂದು ಸಂಸ್ಥೆ ಹೇಳಿದೆ.