ಮಳೆಗೆ ಬಂಟ್ವಾಳದ ಗೂಡಿನ ಬಳಿ ಗುಡ್ಡ ಕುಸಿತ : ಅಪಾಯ ಎದುರಿಸುತ್ತಿರುವ ಮನೆ ಮಂದಿ

ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ವ್ಯಾಪಕ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿಯ ಟಿಪ್ಪು ರಸ್ತೆ ಎಂಬಲ್ಲಿ ಗುಡ್ಡ ಕುಸಿದು ಇಲ್ಲಿನ ಮನೆಗಳ ಜನರು ತೀವ್ರ ಅಪಾಯವನ್ನು ಎದುರಿಸುತ್ತಿದ್ದಾರೆ. ವರ್ಷದ ಹಿಂದೆಯೇ ಗುಡ್ಡ ಸ್ವಲ್ಪ ಮಟ್ಟಿಗೆ ಕುಸಿದಿತ್ತು. ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಮತ್ತಷ್ಟು ಕುಸಿದಿದೆ. ಇದರಿಂದ ಟಿಪ್ಪು ರಸ್ತೆ ಸಂಪೂರ್ಣ ಹಾನಿಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ.
ಗುಡ್ಡ ಕುಸಿದ ಭಾಗ ಮಳೆಯಿಂದ ಮೃದುವಾಗಿ ಸ್ವಲ್ಪ ಸ್ವಲ್ಪ ಮಣ್ಣು ಜಾರುತ್ತಿದ್ದು ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಅಪಾಯ ಇದೆ. ಗುಡ್ಡ ಕುಸಿದ ಭಾಗದ ನೇರ ಕೆಳಗೆ ಎರಡು ಮನೆಗಳು ಇದ್ದು ಮನೆಮಂದಿ ಅಪಾಯವನ್ನು ಎದುರಿಸುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದು ಇದೇ ಮಾದರಿಯ ಭೀತಿಯನ್ನು ಗೂಡಿನಬಳಿ ಟಿಪ್ಪು ರಸ್ತೆಯ ಕೆಳಭಾಗದ ಜನತೆ ಎದುರಿಸುತ್ತಿದ್ದಾರೆ.
ಗುಡ್ಡೆ ಕುಸಿತದಿಂದ ರಸ್ತೆ ಸಂಪೂರ್ಣವಾಗಿ ಕಡಿದು ಹೋಗಿದ್ದು 75ಕ್ಕೂ ಅಧಿಕ ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಇನ್ನಷ್ಟು ಕುಸಿದರೆ ಇಲ್ಲಿಂದ ಹಾದುಹೋದ ಬಂಟ್ವಾಳ ಪುರಸಭಾ ವ್ಯಾಪ್ತಿಯ 27 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಗೆ ಹಾನಿಯಾಗಲಿದ್ದು 27 ವಾರ್ಡ್ ಗಳಿಗೂ ಕುಡಿಯುವ ನೀರು ಪೂರೈಕೆ ಕಡಿತಗೊಳ್ಳಲಿದೆ.
ಗುಡ್ಡ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯ ಪುರಸಭಾ ಸದಸ್ಯೆಯ ನಿಯೋಗದಿಂದ ಜಿಲ್ಲಾಧಿಕಾರಿ, ಶಾಸಕ ರಾಜೇಶ್ ನಾೈಕ್ ಅವರಿಗೆ ಮನವಿ ಸಲ್ಲಿಸಿದೆ. ಶಾಸಕರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.