ಬಂಟ್ವಾಳ : ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಸೊತ್ತುಗಳು ಭಸ್ಮ
ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿಯಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದಕ್ಕೆ ಅತ್ಯಂತ ಭೀಕರ ರೀತಿಯಲ್ಲಿ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಮನೆಯ ಸೊತ್ತುಗಳ ಜತೆಗೆ ಕ್ಯಾಟರಿಂಗ್ ಉದ್ಯಮ ಪಾತ್ರೆ ಪಗಡೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ.ಪುಣ್ಕೆದಡಿ ನಿವಾಸಿ ಲೋಕೇಶ್ ಪೂಜಾರಿ ಅವರ ಮನೆಗೆ ಸಿಡಿಲು ಬಡಿದಿದ್ದು, ಆದರೆ ಮನೆಮಂದಿ ಪಕ್ಕದ ಮನೆಯಲ್ಲಿ ಮಲಗಿದ್ದ ಹಿನ್ನೆಲೆಯಲ್ಲಿ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಇಲ್ಲದೇ ಇದ್ದರೆ ಜೀವಕ್ಕೂ ಅಪಾಯ ಸಂಭವಿಸುವ ಸಾಧ್ಯತೆಯೂ ಇತ್ತು. ಮನೆಯಲ್ಲಿದ್ದ ಟಿವಿ, ಪ್ರಿಡ್ಜ್, ಗ್ರೈಂಡರ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳು, ಬಟ್ಟೆ ಬರೆಗಳು, ಮನೆಯ ದಾಖಲೆ ಪತ್ರಗಳು, ಸಾವಿರಾರು ರೂಪಾಯಿ ನಗದು, ಜತೆಗೆ ಕ್ಯಾಟರಿಂಗ್ ಉದ್ಯಮದ ಪಾತ್ರೆಗಳು, ಇನ್ನಿತರ ಉತ್ಪನ್ನಗಳು ಸಂಪೂರ್ಣ ಭಸ್ಮವಾಗಿದೆ. ನಷ್ಟವಾದ ಸೊತ್ತುಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಲೋಕೇಶ್ ಅವರು ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದು, ಮನೆಯ ಪಕ್ಕದ ಕೋಣೆಯಲ್ಲಿ ಅದರ ಪಾತ್ರೆಗಳು, ಬಟ್ಟಲುಗಳು, ಜತೆಗೆ ಇನ್ನಿತರ ಉತ್ಪನ್ನಗಳನ್ನು ಇರಿಸಿದ್ದರು. ಜತೆಗೆ ಗಣೇಶೋತ್ಸವದ ಹಿನ್ನೆಲೆಯಲ್ಲಿ ಅಡುಗೆಗಳನ್ನೂ ಸಿದ್ಧಪಡಿಸಿ ಮಲಗಿದ್ದರು. ಹೀಗಾಗಿ ಎಲ್ಲಾ ಕಡೆ ಪಾತ್ರೆ ಇರಿಸಿದ್ದ ಕಾರಣಕ್ಕೆ ಪಕ್ಕದ ಸಂಬಂಧಿಕರ ಮನೆಯಲ್ಲಿ ಮಲಗಿದ್ದರು. ತಡರಾತ್ರಿ 2 ಗಂಟೆಯ ವೇಳೆ ಭಾರಿ ಗಾತ್ರದ ಶಬ್ದ ಕೇಳಿ ಓಡಿ ಬಂದಾಗ ಸಿಡಿಲು ಬಡಿದು ಬೆಂಕಿ ಹತ್ತಿ ಉರಿಯುತ್ತಿತ್ತು. ಆದರೆ ಆದಾಗಲೇ ಬಹುತೇಕ ಸೊತ್ತುಗಳು ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಜನಾರ್ದನ ಜೆ, ಗ್ರಾಮಕರಣಿಕ ಚೆನ್ನಬಸಪ್ಪ ಭೇಟಿ ನೀಡಿ ಪರಿಹಾರಕ್ಕಾಗಿ ವರದಿ ನೀಡಿದ್ದಾರೆ. ಭೀಕರ ಘಟನೆಯ ಕುರಿತು ಮಾಹಿತಿ ತಿಳಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಕಾಂಚಲಾಕ್ಷಿ, ಸಾಂತಪ್ಪ ಪೂಜಾರಿ, ಪುರುಷೋತ್ತಮ ಪೂಜಾರಿ, ಶಿವಪ್ಪ ಪೂಜಾರಿ, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ, ಶಶಿಕಾಂತ್ ಶೆಟ್ಟಿ ಅರುಮುಡಿ, ರವೀಂದ್ರ ಶೆಟ್ಟಿ, ಸೀತಾರಾಮ ಪೂಜಾರಿ, ಸಂಜೀವ ಪೂಜಾರಿ, ಕೇಶವ ಪೂಜಾರಿ, ಲೋಕನಾಥ್ ಡೆಚ್ಚಾರ್ ಮೊದಲಾದವರು ಭೇಟಿ ಪರಿಶೀಲಿಸಿದರು.