ಬೆಳ್ತಂಗಡಿಯ ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣ : ಆರೋಪಿಗಳ ಬಂಧನಕ್ಕೆ ಒತ್ತಾಯ

ಬೆಳ್ತಂಗಡಿ ತಾಲೂಕಿನ ಶಿಬಾಜೆ ಕುರುಂಜಿ ಗ್ರಾಮದ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಗೈದಿರುವ ಆರೋಪಿಗಳ ಮೇಲೆ ಕೊಲೆ, ದರೋಡೆ, ಹಲ್ಲೆ, ದಲಿತ ದೌರ್ಜನ್ಯ ದಾಖಲಾದರೂ ರಾಜಕೀಯ ಒತ್ತಡಕ್ಕೆ ಒಳಗಾದ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸದೆ ರಕ್ಷಣೆಗೆ ಮುಂದಾಗಿರುವ ಘಟನೆ ನಡೆದಿದೆ. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ ಜರುಗಿಸಬೇಕೆಂದು ಮೊಗೇರ ಸಂಘ ಮತ್ತು ದಲಿತ ಸಂಘಗಳು ಒತ್ತಾಯಿಸಿವೆ.

ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಅವರು, ಕೊಲೆಗೀಡಾದ ವ್ಯಕ್ತಿ ಶ್ರೀಧರ್ ಆಗಿದ್ದ, ಮೂಲತ ಚಿಕ್ಕಮಗಳೂರು ಜಿಲ್ಲೆಯ ನಿವಾಸಿಯಾಗಿದ್ದು, ಶಿಬಾಜೆಯಲ್ಲಿರುವ ಸಾರಾ ಫಾರ್ಮ್ ಹೌಸ್‍ನ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ, ಈ ಹಿಂದೆ ತೋಟದಲ್ಲಿ ಕೆಲಸ ಮಾಡಿದ್ದ ಪರಿಚಿತರಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದ ಗೌಡ ಎಂಬವರು ಶ್ರೀಧರ್ ಮದುವೆ ವಿಚಾರ ಮುಂದಿಟ್ಟುಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಹಲ್ಲೆ ಪ್ರಕರಣವು ತೋಟದ ಮಾಲೀಕರಿಗೆ ತಿಳಿದು, ತಮ್ಮ ಮೇಲೆ ಕೇಸ್ ದಾಖಲಾಗಬಹುದು ಎಂಬ ಉದ್ದೇಶದಿಂದ ಆರೋಪಿಗಳು ಶ್ರೀಧರನ ರೂಮ್‍ಗೆ ಹೋಗಿ ಈತನನ್ನು ಬೆದರಿಸಿ ಮಧ್ಯದ ಬಾಟಲಿ ಮತ್ತು ಕೀಟನಾಶಕವನ್ನು ಬಾಯಿಗೆ ಸುರಿದು ಕೊಲೆ ಮಾಡಿ ಶ್ರೀಧರನ ಬಳಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಪ್ರಕರಣವನ್ನು ವಿಶೇಷ ನೆಲೆಯಲ್ಲಿ ಕೈಗೆತ್ತಿಕೊಳ್ಳಬೇಕು, ತನಿಖಾಧಿಕಾರಿಯನ್ನು ಬದಲಿಸಿ ಉನ್ನತ ಮಟ್ಟದಲ್ಲಿ ಸಿಓಡಿ ತನಿಖೆ ನಡೆಸಿಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮತಿಯ ಪ್ರಧಾನ ಸಂಚಾಲಕರಾದ ಎಂ ದೇವದಾಸ್, ಉಪ ಪ್ರದಾನ ಸಂಚಾಲಕ ರಮೇಶ್ ಕೋಟ್ಯಾನ್, ಸಲಹೆಗಾರರಾದ ರಮೇಶ್ ಕಾವೂರು ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.