ಬಿಜೆಪಿ ಸಂಸದ, ಶಾಸಕರುಗಳ ಬಣ್ಣ ಟೋಲ್ ಗೇಟ್ ಮುಂಭಾಗ ಕರಗುತ್ತಿದೆ. ವೈ ರಾಘವೇಂದ್ರ ರಾವ್

ಸುರತ್ಕಲ್ ಅಕ್ರಮ ಟೋಲ್ ಗೇಟ್ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜನವಿರೋಧಿ ಆಡಳಿತದ ಸಂಕೇತವಾಗಿ ರಾರಾಜಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹದ ಹೊರತಾಗಿಯೂ ಟೋಲ್ ಕೇಂದ್ರ ಮುಚ್ಚದಿರುವುದರ ಹಿಂದೆ ಭ್ರಷ್ಟಾಚಾರ, ಕಮೀಷನ್, ಖಾಸಗಿ ಕಂಪೆನಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು, ಬಿಜೆಪಿ ಸರಕಾರ ಅಂತಹ ನೀತಿಗಳ ಪರ ನಿರ್ಲಜ್ಜವಾಗಿ ನಿಂತಿರುವುದು ಇಂದು ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ. ಜನಪರ ಕಾರ್ಯಗಳಿಗೆ ಬೆನ್ನು ತಿರುಗಿಸುವ ಬಿಜೆಪಿ ಸಂಸದ ಶಾಸಕರುಗಳ ಬಣ್ಣ ಸುರತ್ಕಲ್ ಟೋಲ್ ಗೇಟ್ ಮುಂಭಾಗ ಕರಗತೊಡಗಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಹ ಸಂಚಾಲಕ ವೈ ರಾಘವೇಂದ್ರ ರಾವ್ ಆರೋಪಿಸಿದರು.

ಅವರು ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ಸಮೀಪ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯ ಎರಡನೇ ದಿನದ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.‌ ಧರಣಿಗೆ ಬೆಂಬಲ ನೀಡಲು ಆಗಮಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಹಮ್ಮದ್ ನಲಪ್ಪಾಡ್, ಬಿಜೆಪಿ ರಾಜ್ಯಾಧ್ಯಕ್ಷರ ತವರಿನಲ್ಲಿ ಅಕ್ರಮವಾಗಿ ಟೋಲ್ ಸುಲಿಗೆ ನಡೆಯುತ್ತಿರುವುದು 40 ಪರ್ಸಂಟ್ ಸರಕಾರದ ನೀತಿಗೆ ಅನುಗುಣವಾಗಿಯೇ ಇದೆ. ಟೋಲ್ ಗೇಟ್ ತೆರವು ಆಗವವರಗೆ ಯುವ ಕಾಂಗ್ರೆಸ್ ಹೋರಾಟದ ಜೊತೆಗಿರಲಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಹಿಳಾ ಮುಖಂಡರಾದ ಶಾಲೆಟ್ ಪಿಂಟೊ, ಭಾರತಿ ಬೋಳಾರ ಸಭೆಯನ್ನುದ್ದೇಶಿಸಿ ಮಾತನಾಡಿದರು‌. ಮಾಜಿ ಸಚಿವ ಅಭಯಚಂದ್ರ ಜೈನ್, ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ದಲಿತ ನಾಯಕ ಎಂ ದೇವದಾಸ್, ಮಾಜಿ ಉಪ ಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಜ್ಯೋತಿ ಮೆನನ್, ಪ್ರಮೀಳಾ ದೇವಾಡಿಗ, ಮಂಜುಳಾ ನಾಯಕ್, ನಾಯಕರಾದ ವಿನಿತ್ ದೇವಾಡಿಗ, ರೇವಂತ್ ಕದ್ರಿ, ವಿವಿಧ ಸಂಘಟನೆಗಳ ಪ್ರಮುಖರಾದ ಬಿ ಕೆ ಇಮ್ತಿಯಾಜ್, ಸುಹೈಲ್ ಕಂದಕ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಗಿರೀಶ್ ಆಳ್ವ, ಶೇಖಬ್ಬ ಕೋಟೆ, ಹಸೈನಾರ್ ಬಿ ಸಿ ರೋಡ್, ರಮೇಶ್ ಟಿ ಎನ್, ಅಯಾಝ್ ಕೃಷ್ಣಾಪುರ, ರಾಜೇಶ್ ಪೂಜಾರಿ ಮತ್ತಿತರರು ಹಾಜರಿದ್ದರು. ಅಪಾರ ಸಂಖ್ಯೆಯ ಜನ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು‌.

Related Posts

Leave a Reply

Your email address will not be published.