ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಂಗಳೂರು : ದಸರಾಕ್ಕೆ ಅದ್ಧೂರಿ ಚಾಲನೆ

ಮಂಗಳೂರಿನ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ಇಂದು ಸಡಗರದಿಂದ ಚಾಲನೆ ಸಿಕ್ಕಿತ್ತು.ಕ್ಷೇತ್ರದ ದಸರಾ ದರ್ಬಾರು ಸ್ವರ್ಣಮಯ ಕಲಾ ಮಂಟಪದಲ್ಲಿ ನವದುರ್ಗೆಯರು ಹಾಗೂ ಗಣಪತಿ ದೇವರ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ, ನವರಾತ್ರಿ ಉತ್ಸವದ ವಿಶೇಷ ಆಕರ್ಷಣೆ ಹಾಗೂ 9 ದಿನಗಳ ಕಾಲ ವಿಶೇಷವಾಗಿ ಆರಾಧಿಸ್ಪಡುವ ಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಕುದ್ರೋಳಿ ಕ್ಷೇತ್ರದ ನವೀಕರಣದ ರುವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕಿ ಉಪಸ್ಥಿತಿಯಲ್ಲಿ ಮಂಗಳೂರು ದಸರಾ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಕುದ್ರೋಳಿ ಕ್ಷೇತ್ರದ ಅಂಗಣದಲ್ಲಿ ಪ್ರದಕ್ಷಿಣೆ ನಡೆಸಿ ದರ್ಬಾರು ಮಂಟಪಕ್ಕೆ ಚೆಂಡೆ, ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಶಾರದಾ ಮೂರ್ತಿಯನ್ನು ಹೊತ್ತು ತರಲಾಯಿತು. ದರ್ಬಾರು ಮಂಟಪದ ವೇದಿಕೆಯಲ್ಲಿ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ ದೀಪ ಬೆಳಗಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ಅಭಯಚಂದ್ರ ಜೈನ್, ಐವನ್ ಡಿಸೋಜಾ, ಕವಿತಾ ಸನಿಲ್, ಕ್ಷೇತ್ರದ ಅಧ್ಯಕ್ಷ ಎಚ್. ಎಸ್. ಸಾಯಿರಾಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ್ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.ಇನ್ನು ದಸರಾ ಮಹೋತ್ಸವದ ಪ್ರಥಮ ದಿನದಂದೇ ಕ್ಷೇತ್ರದ ತುಂಬಾ ಭಕ್ತರ ಮಹಾಪೂರವೇ ಹರಿದು ಬಂದಿತ್ತು.

Related Posts

Leave a Reply

Your email address will not be published.