ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತದಿಂದ ಅವಕಾಶ

ಮಲ್ಪೆ : ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತವು ಅವಕಾಶ ಕಲ್ಪಿಸಿದ್ದು, ಅದರಂತೆ ರವಿವಾರ ಜಲಸಾಹಸಗಳು ಆರಂಭಗೊಳ್ಳುವ ಮೂಲಕ ಮಲ್ಪೆ ಬೀಚ್‌ನಲ್ಲಿ ಚಟುವಟಿಕೆ ಗರಿಗೆದರಿವೆ. ಮಳೆಗಾಲದ ಹಿನ್ನೆಲೆಯಲ್ಲಿ 5 ತಿಂಗಳಿಂದ ಬೀಚ್‌ನಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿದ್ದವು. ಸೆ. 15ಕ್ಕೆ ನಿಷೇಧದ ಅವಧಿ ಮುಗಿದರೂ ಪ್ರತಿಕೂಲ ಹವಾಮಾನದ ಕಾರಣ ಅವಕಾಶ ನೀಡಿರಲಿಲ್ಲ. ಇದೀಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಂತಾಗಿದೆ.

ರವಿವಾರ ಮಲ್ಪೆ ಬೀಚ್‌ನಲ್ಲಿ ಜೆಟ್‌ಸ್ಕೀ, ಬನಾನ ರ್ಯಾಡಿಂಗ್, ಝೋರ್ಬಿಂಗ್, ಬೀಚ್ ಪ್ಯಾರಸೈಲಿಂಗ್, ಬೋಟ್ ರೌಂಡಿಂಗ್, ಬಂಪಿ ರೈಡಿಂಗ್, ಸರ್ಫಿಂಗ್, ವಿಂಚ್ ಪ್ಯಾರಸೈಲಿಂಗ್, ಕಾಯಾಕಿಂಗ್ ಆರಂಭಗೊಂಡಿದೆ. ಪ್ರವಾಸಿಗರು ಬೆಳಗ್ಗಿನಿಂದ ನೀರಾಟದಲ್ಲಿ ತೊಡಿರುವುದು ಕಂಡು ಬಂದಿದೆ. ಸೈಂಟ್‌ಮೇರಿಸ್ ದ್ವೀಪಯಾನ ಆರಂಭಗೊಳ್ಳಲಿದೆ ಎನ್ನುವಾಗಲೇ ಮತ್ತೆ ಮಳೆಗಾಳಿಯಿಂದಾಗಿ ಸಮುದ್ರದ ನೀರಿನ ಒತ್ತಡ ಹೆಚ್ಚಾಗಿರುವುದರಿಂದ ದ್ವೀಪಯಾನ ಆರಂಭಿಸುವ ಬಗ್ಗೆ ಜಿಲ್ಲಾಡಳಿತ ಇನ್ನೂ ಒಪ್ಪಿಗೆ ನೀಡಿಲ್ಲ.