ಸ್ಮಾರ್ಟ್ ಸಿಟಿ ಮಂಗಳೂರಿನ ಗುಂಡಿ ಮಹಿಮೆ, ರಸ್ತೆ ಪಕ್ಕದ ಗುಂಡಿಗೆ ಬಿದ್ದ ಮಹಿಳೆ

ಮಂಗಳೂರು ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ರಸ್ತೆ ಪಕ್ಕದ ಗುಂಡಿಗೆ ಮಹಿಳೆಯೊಬ್ಬರು ಬಿದ್ದ ಘಟನೆ ನಡೆದಿದೆ. ಪತಿಯೊಂದಿಗೆ ತೆರಳುತ್ತಿದ್ದ ಮಹಿಳೆಯು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ತಕ್ಷಣ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಮಹಿಳೆ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕಾಮಗಾರಿಯ ನಿಮಿತ್ತ ಅಗೆಯಲ್ಪಟ್ಟ ಈ ಗುಂಡಿಯನ್ನು ಮುಚ್ಚದೆ ನಿರ್ಲಕ್ಷ್ಯ ತೋರಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳಿಂದ ಜನನಿಬಿಡ ಪ್ರದೇಶದಲ್ಲಿ ಗುಂಡಿ ತೋಡಲಾಗಿದ್ದು, ಕಾಮಗಾರಿ ಪೂರ್ತಿಗೊಳಿಸದೆ ಬಿಟ್ಟ ಕಾರಣ ಈ ದುರಂತ ಸಂಭವಿಸಿದೆ. ಹಗಲು ಹೊತ್ತಿನಲ್ಲೇ ಈ ದುರಂತ ನಡೆದಿದ್ದು, ರಾತ್ರಿ ವೇಳೆ ಆಕಸ್ಮಿಕವಾಗಿ ಈ ಗುಂಡಿಗೆ ಬಿದ್ದರೆ ಅಂತಹವರ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
