ಕೇಂದ್ರದ ಬಿಜೆಪಿ ಆಡಳಿತದ ಜನವಿರೋಧಿ ನೀತಿಗೆ ಖಂಡನೆ : ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಮಂಜೇಶ್ವರ: ಭಾರತದ ಆಯಕಟ್ಟಿನ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಭಾರೀ ಬಂಡವಾಳದ ಕುಳಗಳಾದ ಅದಾನಿ ಮತ್ತು ಅಂಬಾನಿ ಎಂಬ ಆಧುನಿಕ ಕುಬೇರರ ಪಾದಗಳಿಗೆ ಸಮರ್ಪಿಸಿ ದೇಶದ ಆರ್ಥಿಕತೆಯನ್ನು ಪಾತಾಳಕ್ಕಿಳಿಸಿದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಹಿತವನ್ನು ಸಂಪೂರ್ಣವಾಗಿ ಮರೆತಿದೆ. ಜನವಿರೋಧಿ, ಭ್ರಷ್ಟ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಹೋರಾಟ ಮುಂದುವರಿಸಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ.
ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಅದಾನಿ-ಅಂಬಾನಿಗಳ ಕೈಗಳಿಗೊಪ್ಪಿಸಿದ ಮೋದಿ ಸರಕಾರದ ವಿರುದ್ಧ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಉಪ್ಪಳ ಬಿಎಸ್ಸೆನ್ನೆಲ್ ಆಫೀಸ್ ಮುಂದೆ ಆಯೋಜಿಸಿದ್ದ ಪ್ರತಿಭಟನಾ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ್ ಜೆ.ಎಸ್, ಮುಖಂಡರಾದ ಪಿ.ಸೋಮಪ್ಪ, ಮಣಿಕಂಠನ್, ಪಿ.ಎಂ.ಖಾದರ್ ಹಾಜಿ, ಫ್ರಾನ್ಸಿಸ್ ಡಿ’ಸೋಜಾ,ಶಾಫಿ ಮಾಸ್ಟರ್, ಇಕ್ಬಾಲ್ ಕಳಿಯೂರು ಮೊದಲಾದವರು ಪಾಲ್ಗೊಂಡರು.