ಮಂಜೇಶ್ವರ : ಜ್ವಲಂತ ಸಮಸ್ಯೆಗಳಿಗೆ ಕಿವಿಕೊಡದ ಅಧಿಕಾರಿಗಳು

ಮಂಜೇಶ್ವರ :ರಾಷ್ಟೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಅವೈಜ್ಞಾನಿಕ ನಿರ್ಮಾಣ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಮಂಜೇಶ್ವರದ ಕೂಗಿಗೆ ಕಿಂಚತ್ತೂ ಬೆಲೆಯನ್ನು ಕಲ್ಪಿಸದ ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ಣು ಮುಚ್ಚಾಲೆಯಾಟದಿಂದ ಬೇಸೆತ್ತಿರುವ ಮಂಜೇಶ್ವರದ ಸಮಾನ ಮನಸ್ಕರು ಸೇರಿ ಕೊಂಡು ಹೊಸಂಗಡಿಯ ವ್ಯಾಪಾರಿ ಭವಣದಲ್ಲಿ ಮಂಜೇಶ್ವರ ನಾಗರಿಕ ಹಿತರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ನೂತನ ಸಂಘಟನೆಯೊಂದಕ್ಕೆ ರೂಪು ನೀಡಿದ್ದಾರೆ.
ಈಗಾಗಲೇ ಮಂಜೇಶ್ವರ ರೈಲು ನಿಲ್ದಾಣ ಅವಗಣನೆ, ತಲಪಾಡಿ ಟೋಲ್ ಗೇಟ್ ನಲ್ಲಿ ಗಡಿನಾಡ ಜನತೆಗಾಗುವ ಕಿರುಕುಳ, ಕೇರಳ ರಸ್ತೆ ಸಾರಿಗೆ ಬಸ್ ನಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ನಿರಾಕರಣೆ, ಮಂಜೇಶ್ವರ ಸಿ.ಎಚ್.ಸಿ ಆಸ್ಪತ್ರೆಯ ದುರವಸ್ಥೆ, ಪ್ರಧಾನ ಅಂಚೆ ಕಚೇರಿ ನಿರ್ಮಾಣದಲ್ಲಿ ಬೇಜವಾಭ್ಧಾರಿ ನಿಲುವು, ತಲಪಾಡಿ ಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಆಸಡ್ದೆ, ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಮಸ್ಯೆಗಳು, ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸದೆ ಇರುವುದು, ತಾಲೂಕು ಕೇಂದ್ರ ಕಚೇರಿ ಸ್ಥಾಪನೆಯ ಕುರಿತು ಅಸಡ್ಡೆ ಹೀಗೆ ಹಲವಷ್ಟು ಸಮಸ್ಯೆಗಳು ಕಳೆದ ಹಲವಾರು ವರ್ಷಗಳಿಂದ ಯಾವುದೇ ಪರಿಹಾರವಿಲ್ಲದೆ ಮಂಜೇಶ್ವರ ಪೂರ್ಣವಾಗಿ ಅವಗಣಿಸಲ್ಪಡುತ್ತಿದೆ.
ಆರಂಭದಲ್ಲಿ ಬಶೀರ್ ಕನಿಲ ಪ್ರಸ್ತಾವಿಕ ಭಾಷಣ ಮಾಡಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲೆವಿನೋ ಮಂತೆರೋ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಕನಿಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ರಾಧಾ ಎಂ, ಬಿ.ವಿ ರಾಜನ್, ಹರ್ಷಾದ್ ವರ್ಕಾಡಿ, ಜಬ್ಬಾರ್ ಪದವು, ಮಜೀದ್ ಕೀರ್ತೇಶ್ವರ, ಆರ್.ಕೆ ಭಟ್, ಜಿ.ಮುಸ್ತಫಾ ಪಾಂಡ್ಯಾಲ್, ರಹಿಮಾನ್ ಉದ್ಯಾವರ,ಶ್ರೀಧರ್ ಕುಂಜತ್ತೂರ್, ಯಾಕೂಬ್, ಬ್ಲಾಕ್ ಪಂಚಾಯತ್ ಸದಸ್ಯ ಹಮೀದ್ ಹೊಸಂಗಡಿ, ಫಯಾಜ್ ಕುಂಜತ್ತೂರ್, ಹನೀಫ ಶಾರ್ಜಾ , ಮುನೀರ್ ತೂಮಿನಾಡು, ಸಿದ್ದೀಖ್ ತಂಫುಲ್ ಸೇರಿದಂತೆ ಹಲವು ಪ್ರಮುಖರು ಚರ್ಚೆಯಲ್ಲಿ ಭಾಗವಹಿಸಿದರು. ನೂತನ ಹಿತ ರಕ್ಷಣಾ ವೇದಿಕೆಗೆ ಪ್ರಧಾನ ಸಂಚಾಲಕರಾಗಿ ಬಶೀರ್ ಕನಿಲ, ಸಹ ಸಂಚಾಲಕರಾಗಿ ಜಬ್ಬಾರ್ ಪದವು, ಆರ್.ಕೆ ಭಟ್, ಶ್ರೀಧರ ಕುಂಜತ್ತೂರ್, ಮಜೀದ್ ಕೀರ್ತೇಶ್ವರ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
