ಮೂಡುಬಿದರೆ : ಸ್ವಚ್ಛತಾ ಕಾರ್ಯಕ್ರಮ, ಸೆಂಚುರಿ ವಾರ ಪೂರೈಸಿದ ನೇತಾಜಿ ಬ್ರಿಗೇಡ್
ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಡುಬಿದಿರೆಯನ್ನು ತ್ಯಾಜ್ಯ ಮುಕ್ತ ಸ್ವಚ್ಛ -ಸುಂದರ ನಗರವನ್ನಾಗಿಸಲು ಹೊರಟಿರುವ ನೇತಾಜಿ ಬಿಗ್ರೇಡ್ (ರಿ) ಸಂಘಟನೆಯು ದಸರಾ ಹಬ್ಬದ ಪ್ರಯುಕ್ತ ಭಾನುವಾರದಂದು ಸ್ವರಾಜ್ಯ ಮೈದಾನದಲ್ಲಿರುವ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆಯ ಕೈಂಕರ್ಯವನ್ನು ಕೈಗೊಂಡು ಸಂಚುರಿ (100) ವಾರವನ್ನು ಪೂರೈಸಿದೆ.
ನೇತಾಜಿ ಬ್ರಿಗೇಡ್‍ನ 40ಕ್ಕೂ ಅಧಿಕ ಮಂದಿ ಸದಸ್ಯರು ಕಳೆದ ಮೂರು ವರ್ಷಗಳಿಂದ ಮೂಡುಬಿದಿರೆ ಪರಿಸರದಲ್ಲಿರುವ ಶಾಲೆ, ಆಸ್ಪತ್ರೆ, ಶಾಲೆ, ದೇವಸ್ಥಾನದ ಆವರಣ ಹಾಗೂ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಬೀಸಾಡಿ ಹೋಗುವ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಸಹಿತ ಕಸದ ರಾಶಿ ಹಾಗೂ ರಸ್ತೆಗಳ ಬದಿಗಳಲ್ಲಿ ಆವರಿಸಿಕೊಂಡಿರುವ ಗಿಡಗಂಟಿಗಳನ್ನು ತೆಗೆದು ಸ್ವಚ್ಚತೆ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ ಪುರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆಯಿದೆ ಆದ್ದರಿಂದ ಪೌರಕಾರ್ಮಿಕರು ಎಲ್ಲಾ ಕಡೆಗಳಲ್ಲಿ ತುಂಬಿಕೊಂಡಿರುವ ಕಸಗಳನ್ನು ತೆಗೆದು ಸ್ವಚ್ಛತೆ ಮಾಡಲು ಸಾಧ್ಯವಿಲ್ಲ. ನೇತಾಜಿ ಬ್ರಿಗೇಡ್ ಸಂಘಟನೆಯು ಪ್ರತಿ ವಾರ ವಾರ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಪುರಸಭಾ ವ್ಯಾಪ್ತಿಯಲ್ಲಿ ನಮಗೆ ಕಾಣದ ಕಸಕಡ್ಡಿ, ತ್ಯಾಜ್ಯಗಳನ್ನು ತೆಗೆಯುವ ಮೂಲಕ ಪುರಸಭೆಗೆ ಸಹಕಾರವನ್ನು ನೀಡುತ್ತಾ ಬರುತ್ತಿರುವುದರಿಂದ ಪುರಸಭೆಗೂ ಸ್ವಲ್ಪ ಹೊರ ಕಡಿಮೆಯಾಗುತ್ತದೆ. ಅಲ್ಲದೆ ಸ್ವಚ್ಛ ಮೂಡುಬಿದಿರೆ ನಗರಕ್ಕೆ ಈ ಸಂಘಟನೆಯ ಕೊಡುಗೆ ಅಪಾರ ಇದೆ ಎಂದರು.
ಕಲ್ಲಬೆಟ್ಟು ಗಣೇಶೋತ್ಸವ ಸೇವಾ ಟ್ರಸ್ಟ್‍ನ ಅಧ್ಯಕ್ಷ ಶಿಕಾರಿಪುರ ಈಶ್ವರ ಭಟ್ ಭಾಗವಹಿಸಿ ಮಾತನಾಡಿ ಸ್ವಚ್ಛತೆ ಮಾಡುವುದೂ ಒಂದು ದೇಶ ಸೇವೆಯಂತೆ, ಸದಾ ಕ್ರೀಯಾಶೀಲರಾಗಿ ಸೇವೆಯನ್ನು ಮಾಡುತ್ತಿರಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್‍ನ ಸಂಚಾಲಕ ರಾಹುಲ್ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ, ಸೌಮ್ಯ ಶೆಟ್ಟಿ, ದಿವ್ಯಾ ಜಗದೀಶ್, ಜಿಲ್ಲಾ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮನಶಾಸ್ತ್ರಜ್ಞೆ ಸುಶ್ಮಿತಾ. ಬಿ.ಆರ್, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗಾಂಧಿನಗರ ಇದರ ಅಧ್ಯಕ್ಷ ಸದಾನಂದ ಪೂಜಾರಿ, ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಮತ್ತು ಸರ್ವೋದಯ ಫ್ರೆಂಡ್ಸ್, ಮಾರಿಗುಡಿ ಫ್ರೆಂಡ್ಸ್‍ನ ಸದಸ್ಯರು, ನೇತಾಜಿ ಬ್ರಿಗೇಡ್ ನ ಪದಾಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.