ಮೂಡುಬಿದರೆ: ಅಂತರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ಕಾರ್ಕಳದ ದಾಮೋದರ ಆಚಾರ್ಯ ಕುಟುಂಬದ ಕಮ್ಮಾರಿಕೆ

ಅದೊಂದು ಕಮ್ಮಾರಿಕೆಯ ಸ್ಟಾಲ್. ಅದರೊಳಗಡೆ ಮಲಗಿಕೊಂಡಿರುವ ಎರಡು ನಾಯಿಗಳು, ಇನ್ನೊಂದು ಕಡೆಯಲ್ಲಿ ಹುಡುಗಿಯೊಬ್ಬಳು ಕತ್ತಿಗಾಗಿ ಮರದ ಕೈಯನ್ನು ತಯಾರಿಸುತ್ತಿರುವುದು, ಇನ್ನೊಂದು ಕಡೆಯಲ್ಲಿ ಮಹಿಳೆಯೊಬ್ಬರು ಕಮ್ಮಾರಿಕೆಗೆ ಬೇಕಾದ ವಸ್ತುಗಳ ತಯಾರಿಕೆಯಲ್ಲಿ ನಿರತರಾಗಿರುವುದು ಮತ್ತೊಂದು ಕಡೆಯಲ್ಲಿ ಗಂಡಸು ಮತ್ತು ಮಗ ಸೇರಿಕೊಂಡು ಕತ್ತಿಯನ್ನು ರೆಡಿ ಮಾಡುತ್ತಿರುವ ದೃಶ್ಯವೊಂದು ಎಲ್ಲರ ಗಮನ ಸೆಳೆಯುತ್ತಿರುವುದು ಜಾಂಬೂರಿಯಲ್ಲಿ. ಹೀಗೆ ಕಮ್ಮಾರಿಕೆಯಲ್ಲಿ ತೊಡಗಿಕೊಂಡಿರುವುದು ಬೇರೆ ಬೇರೆಯವರಲ್ಲ ಬದಲಾಗಿ ಒಂದೇ ಕುಟುಂಬದ ಸದಸ್ಯರು.

ಕಾರ್ಕಳ ತಾಲೂಕಿನ ಬೈಲೂರಿನ ಕಾಂತರಗೋಳಿಯವರಾದ ದಾಮೋದರ ಆಚಾರ್ಯ ಪುಷ್ಪಾವತಿ ದಂಪತಿಗಳು ಹಾಗೂ ಅವರ ಮಗಳು ಮತ್ತು ಮಗ. ದಾಮೋದರ ಅವರು ಕಳೆದ 35 ವರ್ಷಗಳಿಂದ ಕಮ್ಮಾರಿಕೆ ವೃತ್ತಿಯನ್ನು ಮಾಡುತ್ತಿದ್ದಾರೆ. ದಾಮೋದರ ಆಚಾರ್ಯ ರಿಗೆ ತನ್ನ ಪತ್ನಿ ಪುಷ್ಪಾವತಿಯವರೆ ಸಾಥ್ ನೀಡುತ್ತಿದ್ದಾರೆ. ಕೃಷಿಮೇಳ , ಮಂಗಳೂರು ಪುತ್ತೂರು , ಸುಳ್ಯ ಬಂಟ್ವಾಳ , ವಿವಿಧೆಡೆ ಗಳಲ್ಲಿ ಸಾಂಸ್ಕೃತಿಕ ಉತ್ಸವಗಳಲ್ಲಿ ಕತ್ತಿ ತಯಾರಿಸಿ ಪ್ರಾತ್ಯಕ್ಷಿಕೆ ನೀಡುತ್ತಾರೆ.
ಕೊಡಲಿ, ಹಾರೆ , ಪಿಕ್ಕಾಸಿ , ಕತ್ತಿ ,ಚೂರಿ,ಮೆಟ್ಟುಕತ್ತಿ , ತುರಿ ಮಣೆಗಳು ಸೇರಿದಂತೆ ವಿವಿಧ ಕಬ್ಬಿಣದ ವಸ್ತುಗಳು ತಯಾರಾಗುತ್ತವೆ. ರೇಡಿಯೋ ಪ್ರೇಮಿಯಾಗಿರುವ ಇವರು ಕಮ್ಮಾರಿಕೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ರೇಡಿಯೋವನ್ನು ಕೇಳುತ್ತಾ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ.ಬೇಲೂರಿನಲ್ಲಿ ಕಮ್ಮಾರಿಕೆ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಕೃಷಿಮೇಳ , ವಿವಿಧೆಡೆ ಗಳಲ್ಲಿ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸುವಾಗ ತನ್ನ ಜೊತೆ ತಮ್ಮ ಕುಟುಂಬದ ಸದಸ್ಯರಂತಿರುವ ಎರಡು ಶ್ವಾನಗಳನ್ನೂ ಅವರು ತಮ್ಮ ಜತೆಯಲ್ಲೇ ಕರೆದುಕೊಂಡು ಹೋಗುತ್ತಾರೆ. ಅವುಗಳು ತನ್ನ ಸ್ಟಾಲ್ ವ್ಯಾಪ್ತಿ ದಾಟಿ ಸಾಗಲ್ಲ ,ಪ್ರೇಕ್ಷಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ.
