ಅಂತಾರಾಷ್ಟೀಯ ಜಾಂಬೂರಿಯಲ್ಲಿ ಮೂಡಿ ಬರಲಿದೆ ಆಕರ್ಷಕ ಕಾನನ

ಮೂಡುಬಿದಿರೆ: ಅಂತಾರಾಷ್ಟ್ರೀಯ ಸ್ಕೌಟ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ವಿದ್ಯಾಗಿರಿಯು ವಿವಿಧ ರೂಪದಲ್ಲಿ ಸಜ್ಜಾಗೊಳ್ಳುತ್ತಿದ್ದು ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಕೃತಿ ಸಂರಕ್ಷಣೆಯ ಬಗ್ಗೆ ಮಹತ್ವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಡುಬಿದಿರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ.ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ನೇತೃತ್ವದಲ್ಲಿ ಕಳೆದ ಮೂರು ವಾರಗಳಿಂದ 50ರಿಂದ 60 ಮಂದಿ ಕಾರ್ಮಿಕರು ಕೆಲಸ ಮಾಡುವ ಮೂಲಕ 10 ಎಕರೆ ಪ್ರದೇಶದಲ್ಲಿ ಆಕರ್ಷಣೆಯೊಂದಿಗೆ ನೈಸರ್ಗಿಕವಾಗಿ ಕಾನನವನ್ನು ಚಿತ್ರಿಸಿದ್ದಾರೆ.

ಆಳ್ವಾಸ್ ಕ್ಯಾಂಪಸ್ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ವಿವಿಧ ಮಾದರಿಗಳಲ್ಲಿ ಕಾನನದ ಚಿತ್ರಣ ನೀಡಲು ಸಜ್ಜಾಗೊಳ್ಳುತ್ತಿದ್ದು ಅದರೊಂದಿಗೆ ಕಾಡಿನ ನಂಟಿನೊಂದಿಗಿನ ಜೀವನದ ಚಿತ್ರಣವನ್ನೂ ಬಿಂಬಿಸುವ ಪ್ರಯತ್ನಗಳಾಗುತ್ತಿದ್ದು ಅರಣ್ಯ, ಅದರೊಳಗಿನ ಪರಿಕಲ್ಪನೆಗಳು ಜಾಂಬೂರಿಯಲ್ಲಿ ಕಾಣಸಿಗುತ್ತವೆ.

ಕಾನನದೊಳಗೆ ಪ್ರವೇಶಿಸುವ ಧ್ವಾರದಲ್ಲಿ ಹುಲಿಯೊಂದು ಬಾಯ್ತೆರೆದು ನಿಂತಿರುವ ಆಕೃತಿಯಿದ್ದು, ಅದರ ಬಾಯಿಯೊಳಗಿನಿಂದ ಪ್ರವೇಶಿಸಬೇಕಾಗುತ್ತದೆ. ಅದಕ್ಕಿಂತ ಮುಂದಕ್ಕೆ ಹೋದಾಗ ಬೃಹದಾಕಾರದ ಮೊಸಳೆಯು ಬಾಯ್ದೆರೆದು ನಿಂತಿರುವ ಮಾದರಿಯಲ್ಲಿ ನಿರ್ಮಾಣಗೊಂಡಿದ್ದು ಇದರ ಒಳಗೆ ಪ್ರವೇಶಿಸಿ ನಂತರ ಹೊರ ಬರಬೇಕಾಗುತ್ತದೆ. ನಂತರ ಅರುವತ್ತು ಅಡಿಗಳ ದೂರ ಕ್ರಮಿಸಿದರೆ ಎಡಭಾಗದಲ್ಲಿ ಗುತ್ತಿನ ಮನೆ, ಮನೆಯ ಮುಂಭಾಗದ ಬಾಕಿಮಾರ್‍ಗದ್ದೆ, ತುಸು ಮುಂದೆ ಸಾಗಿದರೆ ಮರದ ಕೆಲಸ, ಕಬ್ಬಿಣದ ಕೆಲಸ, ಬುಟ್ಟಿಹೆಣೆಯುವ ಸಮೂಹ, ಮಣ್ಣು ಹದಮಾಡಿ ಮಡಿಕೆ ಮಾಡುವುದು, ತಪಸ್ಸು ನಿರತ ಋಷಿ ಮುನಿಗಳು, ಜಲಧಾರೆ, ತೂಗು ಸೇತುವೆ ಮಾದರಿಗಳನ್ನು ರಚಿಸಲಾಗುತ್ತಿದೆ. ಕುದುರೆಮುಖದ ನಿತ್ಯ ಹರಿದ್ವರ್ಣದ ಶೋಲಾ ಅರಣ್ಯವನ್ನು ನೆನಪಿಸುವ ರೀತಿಯಲ್ಲಿ ಅರಣ್ಯದ ತುಂಬೆಲ್ಲಾ ಜಿಂಕೆಗಳ ಹಿಂಡು, ಹುಲಿ ಹೆಬ್ಬುಲಿಗಳು, ಕಾಡಿನ ರಾಜ ಸಿಂಹ, ಕರಡಿ ಇತರೆ ಪ್ರಾಣಿ ಪಕ್ಷಿಗಳು, ಹಕ್ಕಿಗಳ ಇಂಚರ ನಿನಾದ ಅನುಭವಗಳಲ್ಲಿ ಸೃಷ್ಟಿಸುವ ಮಾದರಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ನೈಸರ್ಗಿಕವಾಗಿ ಮರ ಗಿಡಗಳನ್ನು ಬಿಟ್ಟರೆ ಉಳಿದಂತೆ ಮಾದರಿ ಪರಿಕರಗಳನ್ನು ಉಪಯೋಗಿಸಿ ಜನರಿಗೆ ಕಾಡಿನ ಅನುಭವವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

Related Posts

Leave a Reply

Your email address will not be published.