ಎಸ್ ಡಿ ಎಂ ಕಾಲೇಜಿನ ಎನ್ ಸಿ ಸಿ ನೌಕಾ ವಿಭಾಗದ ಆರು ಕೆಡೆಟ್ ಗಳಿಗೆ ಬಂಗಾರದ ಪದಕ 

ದೆಹಲಿಯಲ್ಲಿ ನಡೆದ 2023 ರ ಗಣರಾಜ್ಯೋತ್ಸವ ಪರೇಡ್ ನಲ್ಲಿ  ಉಜಿರೆ ಎಸ್ ಡಿ ಎಮ್ ಕಾಲೇಜಿನ ನೌಕಾ ವಿಭಾಗದ 6 ಕೆಡೆಟ್ ಗಳು ಶಿಪ್ ಮೊಡೆಲಿಂಗ್ ವಿಭಾಗದಲ್ಲಿ ಬಂಗಾರದ ಪದಕವನ್ನು ಗಳಿಸಿ ಸಂಸ್ಥೆಗೆ ಗೌರವವನ್ನು ತಂದಿದ್ದಾರೆ. ಪಿಓ ಕೆಡೆಟ್  ಶ್ರೀರಾಮ ಮರಾಠೆ  ಮತ್ತು ಪಿಓ ಕೆಡೆಟ್ ಅನನ್ಯಾ ಕೆ.ಪಿ ಇವರು ಪವರ್ ಮಾಡೆಲ್ ವಿಭಾಗದಲ್ಲಿ ಬಂಗಾರದ ಪದಕವನ್ನು ಸಂಪಾದಿಸಿದ್ದಾರೆ. ಇಡೀ ದೇಶದ 17 ಡೈರೆಕ್ಟರೇಟ್ ನವರು ಸಿದ್ಧಪಡಿಸಿ ಪರೀಕ್ಷೆಗೊಳಪಡಿಸಿದ ಈ ಸ್ಪರ್ಧೆಗಳಲ್ಲಿ ಇವರು ಸಿದ್ಧಪಡಿಸಿದ ಮಾಡೆಲ್ ಅತ್ಯುತ್ತಮ ಎಂದು ಪರಿಗಣಿಸಿ ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ.

  ಇದೇ ರೀತಿ ಇನ್ನೊಂದು ವಿಭಾಗ ವಿಐಪಿ ಮೊಡೆಲ್. ಉಜಿರೆ ಎಸ್ ಡಿ ಎಮ್ ಕಾಲೇಜಿನ ಕೆಡೆಟ್ ಗಳಾದ ಖುಶಿ ಎಮ್, ರಾಘವೇಂದ್ರ ಮತ್ತು ಯುನೀತ್  ಇವರು ಸಿದ್ಧಪಡಿಸಿದ ಈ ಮಾಡೆಲ್ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ನಲ್ಲಿ ಆಯ್ಕೆಯಾಗಿ ನಂತರ ದೆಹಲಿಯಲ್ಲಿ ನಡೆದ ಸ್ಪರ್ಧೆಯ ವಿಐಪಿ ಮಾಡೆಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಬಂಗಾರದ ಪದಕಕ್ಕೆ ಆಯ್ಕೆಯಾಯಿತು.

 ಕೆಡೆಟ್ ಖುಶಿ ಎಮ್ ಸಿದ್ಧಪಡಿಸಿದ ಮಾಡೆಲ್ ಗೆ ವಿಶಾಖಪಟ್ಟಣದಲ್ಲಿ ನಡೆದ ಅಖಿಲ ಭಾರತ ನೌ ಸೈನಿಕ್ ಶಿಬಿರದಲ್ಲಿ ಬಂಗಾರದ ಪದಕ ಬಂದಿದೆ. 

ಕರ್ನಾಟಕ ಮತ್ತು ಗೋವಾ ಡೈರೆಕ್ಟರೆಟನ್ನು ಪ್ರತಿನಿಧಿಸಿದ ಶಿಪ್ ಮೊಡೆಲಿಂಗ್ ಕೆಡೆಟ್ ಗಳ ವಿಶಿಷ್ಟ ಸಾಧನೆಯ ಫಲವಾಗಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಅಡ್ಮಿರಲ್ ನಂದ ರೋಲಿಂಗ್ ಟ್ರೋಫಿ ಸಿಲ್ವರ್ ಶಿಪ್ ಪಡೆಯಲು ಅರ್ಹವಾಗಿದೆ. ಈ ಎಲ್ಲಾ ಕೆಡೆಟ್ ಗಳ ವಿಶೇಷ ಪರಿಶ್ರಮದ ಫಲವಾಗಿ 20 ವರ್ಷಗಳ ನಂತರ ಈ ವರ್ಷ ಸಿಲ್ವರ್ ಶಿಪ್ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಗೆ ಬಂದಿದೆ. ಶಿಪ್ ಮಾಡೆಲಿಂಗ್ ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸಿ ಪದಕ ಗೆದ್ದ 9 ಕೆಡೆಟ್ ಗಳಲ್ಲಿ  6 ಕೆಡೆಟ್ ಗಳು ಉಜಿರೆ ಎಸ್ ಡಿ ಎಮ್ ಕಾಲೇಜಿನವರೆಂಬದು ವಿಶೇಷ.

  ಕಾಲೇಜಿನ ನೇವಿ ಕೆಡೆಟ್ ಗಳಾದ ಹೇಮಂತ್ ಎಂ.ಜಿ ಮತ್ತು ಮಹಮ್ಮದ್ ನವಾಜ್ ಇವರು ಪ್ರಧಾನ ಮಂತ್ರಿಗಳ ಮತ್ತು ವಿಐಪಿಗಳ ಗಾಡ್ ಆಫ್ ಆನರ್ ನಲ್ಲಿ ಭಾಗವಹಿಸಿದ್ದರು. ಈ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ  7 ಕೆಡೆಟ್ ಗಳಲ್ಲಿ ಮೂವರು ಉಜಿರೆ ಎಸ್ ಡಿ ಎಮ್ ಕಾಲೇಜಿನವರಾಗಿದ್ದರು.

ಈ ಎಲ್ಲಾ ಕೆಡೆಟ್ ಗಳ ವಿಶೇಷ ಸಾಧನೆಯನ್ನು ಗಮನಿಸಿ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ನ  ಡೆಪ್ಯೂಟಿ ಡೈರೆಕ್ಟರ್ ಜನರಲ್(ಡಿಡಿಜಿ) ಏರ್ ಕಮಾಡೋರ್ ಬಿ ಎಸ್ ಕನ್ವರ್ ಇವರು ಡಿಡಿಜಿ ಕಮಂಡೇಶನ್ ( ಪ್ರಶಂಸಾ ಪತ್ರ) ನೀಡಿ ಇವರನ್ನು ಗೌರವಿಸಿದರು.

  ಈ ವರ್ಷ ಉಜಿರೆ ಎಸ್ ಡಿ ಎಮ್ ಕಾಲೇಜಿನ ನೇವಿ ಮತ್ತು ಆರ್ಮಿ ವಿಭಾಗದ 7 ಕೆಡೆಟ್ ಗಳು ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದು ವಿಶಿಷ್ಟ ಸಾಧನೆಯಾಗಿದೆ.

ಶಿಪ್ ಮಾಡೆಲಿಂಗ್ ವಿಭಾಗದಲ್ಲಿ ಆಧುನಿಕ ಉಪಕರಣಗಳನ್ನು ಸಂಗ್ರಹಿಸಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ತರಬೇತಿಯನ್ನು ನೀಡಿ ಮಾರ್ಗದರ್ಶನವನ್ನು ನೀಡುತ್ತಿರುವವರು ಉಜಿರೆ ಎಸ್ ಡಿ ಎಮ್ ಕಾಲೇಜಿನ ಎನ್ ಸಿ ಸಿ ನೌಕಾವಿಭಾಗದ ಅಧಿಕಾರಿ ಅಸೋಸಿಯೇಟೆಡ್ ಎನ್ ಸಿಸಿ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಶ್ರೀಧರ ಭಟ್ ಇವರು. ಹಿರಿಯ ಎನ್ ಸಿಸಿ ಕೆಡೆಟ್ ಗಳಾದ ಅಖಿಲೇಶ್ ಸುವರ್ಣ ಮತ್ತು ಶ್ಯಾಮಪ್ರಸಾದ್ ಹೆಚ್ ಪಿ ಇವರು ಕೆಡೆಟ್ ಗಳಿಗೆ ವಿಶೇಷ ತರಬೇತಿಯನ್ನು ನೀಡಿದ್ದರು. 5 ಕರ್ನಾಟಕ ನೇವಲ್ ಯುನಿಟ್ ಕಮಾಂಡಿಂಗ್ ಆಫೀಸರ್  ಲೆಫ್ಟಿನೆಂಟ್ ಕಮಾಂಡರ್ ಭರತ್ ರಾವ್ ಹಾಗೂ ಎಸ್ ಎಮ್ ಐ ಭಾಗ್ಯಶ್ರೀ ಇವರು  ಸೂಕ್ತ ಸಲಹೆ ಮತ್ತು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ..

Related Posts

Leave a Reply

Your email address will not be published.