‘ಹೋದ್ರೆ ನನ್ನದೊಂದು ತಲೆಕೂದಲು ಮಾತ್ರ ಅಲ್ವಾ’ : ಸರ್ಕಾರದ 5 ಗ್ಯಾರಂಟಿಗಳ ಜಾರಿ ಬಗ್ಗೆ ಕುಯಿಲಾಡಿ ಮಾರ್ಮಿಕ ನುಡಿ
ಉಡುಪಿ : ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಸರಕಾರ ನೀಡಿದ 5 ಗ್ಯಾರಂಟಿಗಳ ಪ್ರಣಾಳಿಕೆ ಕುರಿತು ಉಡುಪಿ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ನೀಡಿರುವ ಹೇಳಿಕೆ ಚುನಾವಣಾ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಬಹಳ ಸದ್ದು ಮಾಡಿತ್ತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿಗಳ ಪೂರೈಕೆ ಮಾಡಿದರೆ ನಾನು ಕೆಪಿಸಿಸಿ ಕಚೇರಿ ಎದುರು ತಲೆ ಬೋಳಿಸಿ ಕೂತುಕೊಳ್ಳಲು ಸಿದ್ದನಿದ್ದೇನೆ ಎಂದು ಚುನಾವಣಾ ಸಂದರ್ಭದಲ್ಲಿ ಕುಯಿಲಾಡಿ ಸುರೇಶ್ ನಾಯಕ್ ಅವರು ನೀಡಿರುವ ಹೇಳಿಕೆಯ ವಿಚಾರವಾಗಿ ಉಡುಪಿಯಲ್ಲಿರುವ ತಮ್ಮ ಬಿಜೆಪಿ ಕಚೇರಿಯಲ್ಲಿ ಮತ್ತೊಮ್ಮೆ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅಂದು ಹೇಳಿದ ಮಾತಿಗೆ ಈಗಲೂ ಬದ್ದನಾಗಿದ್ದೇನೆ. ಸರಕಾರ 24 ಗಂಟೆ ಒಳಗೆ ಗ್ಯಾರಂಟಿ ಯೋಜನೆ ಜಾರಿ ತರುತ್ತೇವೆ ಎಂದು ಹೇಳಿದ್ದಾರೆ. ಮೊದಲೇ ಸರಕಾರ ಹೇಳಿದ ಮಾತಿಗೆ ತಪ್ಪಿದೆ. ಸರಕಾರ ಯಾವುದೇ ಷರತ್ತುಗಳನ್ನು ಹಾಕದೇ ಐದು ವರ್ಷ ಗ್ಯಾರಂಟಿ ಯೋಜನೆಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಆಗ ನಾನು ಕೆಪಿಸಿಸಿ ಕಚೇರಿ ಎದುರು ತಲೆ ಬೋಳಿಸಿ ಕೂತುಕೊಳ್ಳಲು ಸಿದ್ದನಿದ್ದೇನೆ ಎಂದು ಹೇಳಿದ್ದೆ. ಈ ಮಾತಿಗೆ ಈಗಲೂ ನಾನು ಬದ್ಧನಿದ್ದೇನೆ. ಇವರಿಗೆ ಗ್ಯಾರಂಟಿ ಯೋಜನೆ ಕೊಡಲು ಸಾದ್ಯವಿಲ್ಲ. ರಾಜ್ಯದ ಜನತೆಗೆ ನನ್ನಿಂದ ಒಳಿತಾದ್ರೆ ಆಗಲಿ, ಹೋದ್ರೆ ನನ್ನದೊಂದು ತಲೆಕೂದಲು ಮಾತ್ರ ಅಲ್ವಾ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.