ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯ ನಿಧನ

ಮಂಗಳೂರು: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯನವರು ನಿನ್ನೆ ರಾತ್ರಿ ಮಣಿಪಾಲ  ಕೆಎಂಸಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪಿ. ಡಿಕಯ್ಯನವರು, ತಮ್ಮ ಬಹು ಅಂಗಾಂಗಗಳನ್ನು ದಾನ ಮಾಡಿದ್ದಾರೆ.  ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ಪದ್ಮುಂಜದಲ್ಲಿರುವ ಅವರ ನಿವಾಸದ ಬಳಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸಿದ ಪಿ.ಡೀಕಯ್ಯನವರು, ದೇಶದ ಇತಿಹಾಸದ ಜೊತೆಗೆ ತುಳುನಾಡಿನ ಇತಿಹಾಸವನ್ನೂ ಅರೆದು ಕುಡಿದಿದ್ದರು. ತುಳುನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಯುವಕರಲ್ಲಿ ಬಹುಜನ ಚಳುವಳಿಯನ್ನು ತುಂಬಿ, ಸಾಕಷ್ಟು ನಾಯಕರನ್ನು ಸೃಷ್ಟಿಸಿದ್ದರು

ಕಾನದ ಕಟದರ ಇತಿಹಾಸದ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದ, ಡೀಕಯ್ಯರು ಅಪ್ರತಿಮ ಬರಹಗಾರರು ಕೂಡ ಆಗಿದ್ದರು. ಮನುವಾದದ ಕಡು ವಿರೋಧಿಯಾಗಿದ್ದ ಡೀಕಯ್ಯರು, ಅಸ್ಪೃಶ್ಯತೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಪಿ.ಡೀಕಯ್ಯನವರ ಅಕಾಲಿಕ ನಿಧನದಿಂದ ಅವರ ಅಭಿಮಾನಿಗಳು, ಹಿತೈಷಿಗಳು ತೀವ್ರವಾಗಿ ದುಃಖಿತರಾಗಿದ್ದಾರೆ. ಸಾಕಷ್ಟು ಹೋರಾಟಗಳಿಗೆ ಮಾರ್ಗದರ್ಶಕರಾಗಿದ್ದ ಪಿ.ಡೀಕಯ್ಯನವರ ನಿಧನದಿಂದ ಬಹುಜನ ಚಳುವಳಿಗೆ ಭಾರೀ ನಷ್ಟವಾಗಿದೆ.

ಜೀವದ ಗೆಳೆಯ ಡೀಕಯ್ಯ ಇನ್ನಿಲ್ಲ.

ಈ ಸುದ್ದಿಯನ್ನು ಅರಗಿಸಿಕೊಳ್ಳುವುದು ನನಗೆ ಕಷ್ಟ. ಕರ್ನಾಟಕದ ಇತರೆಡೆಗಳಲ್ಲಿ ( 80ರ ದಶಕ)ದಲಿತ ಚಳುವಳಿ ಜೋರಾಗಿ ಬೆಳೆಯುತ್ತಿದ್ದಾಗ ಅದನ್ನು ತುಳುನಾಡಿನಲ್ಲಿ ಕಟ್ಟಿ ಬೆಳೆಸಿದವರು ಡೀಕಯ್ಯ. ಬೆಳ್ತಂಗಡಿಯ ಪದ್ಮುಂಜದಲ್ಲಿ ಹುಟ್ಟಿದ ಅವರು ಮುಂದೆ
ಕರಾವಳಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸುತ್ತಾಡಿದರು. ಸಮಾಜ ಪರಿವರ್ತನೆಯ ಕನಸನ್ನು ಕಟ್ಟುತ್ತಾ ನನ್ನಂಥವನನ್ನೂ ಚಳುವಳಿಯ ಕಡೆ ಸೆಳೆದರು. ದಲಿತರನ್ನು ಸಂಘಟಿಸಿದರು. ದೇವಸ್ಥಾನಗಳನ್ನು ಹೊಕ್ಕರು. ಬಿಕ್ಕಟ್ಟಿನ ಕ್ಷಣಗಳಲ್ಲಿ ಹೋರಾಟಗಾರರ ಜೊತೆ ಗಟ್ಟಿಯಾಗಿ ನಿಂತರು. ಅಂಬೇಡ್ಕರ್ ಬರೆಹಗಳನ್ನು ತನ್ನೊಡನಿದ್ದ ಜನರಿಗೆ ಓದಿ ಹೇಳಿದರು. ದಲಿತರದೇ ಯಕ್ಷಗಾನ ತಂಡ ಕಟ್ಟಿದರು.ಅವರನ್ನು ಕಳಕೊಂಡು ನಾವು ಬಡವಾದೆವು.

ಪುರುಷೋತ್ತಮ ಬಿಳಿಮಲೆ

Related Posts

Leave a Reply

Your email address will not be published.