ತೆರಿಗೆ ಕಟ್ಟಲು ಒತ್ತಡ ಹೇರಿದ ವಿಚಾರ : ಪಲಿಮಾರು ಗ್ರಾ.ಪಂ. ಅಧ್ಯಕ್ಷರಿಗೆ ಧಮ್ಕಿ ಹಾಕಿದ ಕಂಪೆನಿ ಮುಖ್ಯಸ್ಥರು

ತೆರಿಗೆ ಕಟ್ಟಲು ಒತ್ತಡ ಹೇರಿದ್ದಾರೆ ಎಂಬ ಕಾರಣಕ್ಕೆ ನಂದಿಕೂರು ಕೈಗಾರಿಕಾ ವಲಯದಲ್ಲಿ ಕಾರ್ಯಚರಿಸುತ್ತಿರುವ ಕಂಪನಿಯೊಂದರ ಮುಖ್ಯಸ್ಥರು ಪಲಿಮಾರು ಗ್ರಾ.ಪಂ. ಅಧ್ಯಕ್ಷರ ಛೇಂಬರ್ ಗೆ ಹೋಗಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ ಗ್ರಾ.ಪಂ. ಆಢಳಿತ ಸಮಿತಿ ಸದಸ್ಯರು ಅಧ್ಯಕ್ಷರೊಂದಿಗೆ ತೆರಳಿ ಕಂಪನಿ ಪ್ರಮುಖರಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಸೃಷ್ಠಿ ಹೆಸರಿನ ಕಚ್ಚಾವಸ್ತುಗಳ ಮರು ಬಳಕೆ ಕಂಪನಿಯ ಪ್ರಮುಖರೇ ಆರೋಪಿಗಳು, ಅದಲ್ಲದೆ ಇದೇ ಕಂಪನಿಯ ವಠಾರದಲ್ಲಿ ಪ್ಲಾಸ್ಟಿಕ್ ಸುಟ್ಟು ಪರಿಸರಕ್ಕೆ ಹಾನಿ ಮಾಡಿದ ಬಗ್ಗೆ ಕಂಪನಿ ಪ್ರಮುಖರು ಒಪ್ಪಿ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ. ದಂಡ ವಸೂಲಿ ಮಾಡಲು ಮುಂದಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ವರದಿ ಕಳುಹಿಸಲಾಗಿದೆ ಎಂಬುದಾಗಿ ಅಧ್ಯಕ್ಷೆ ಗಾಯತ್ರಿ ಪ್ರಭು ತಿಳಿಸಿದ್ದಾರೆ. ತೆರಿಗೆ ಕಟ್ಟದಂತೆ ಕಂಪನಿಗೆ ಪಿಡಿಒ ಏಕೆ ನಿರ್ದೇಶನ ನೀಡಿದ್ದಾರೆ ಎಂಬುದು ತಿಳಿದಿಲ್ಲ ಈ ಬಗ್ಗೆ ಕೂಡಾ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಾಗುವುದು ಎಂಬುದಾಗಿ ಗ್ರಾ.ಪಂ. ಅಧ್ಯಕ್ಷರು ತಿಳಿಸಿದ್ದಾರೆ. ಈ ಸಂದರ್ಭ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ಹಾಗೂ ಸಿಬ್ಬಂದಿಗಳು ಸಹಿತ ಗ್ರಾ.ಪಂ. ನ ಹೆಚ್ಚಿನ ಸದಸ್ಯರು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದರು.