ರಸ್ತೆ ವಿಭಜಕವೇರಿ ಮಗುಚಿ ಬಿದ್ದ ಗೂಡ್ಸ್ ಟೆಂಪೊ
ಎರ್ಮಾಳು-ಪಡುಬಿದ್ರಿ ಗಡಿಭಾಗ ರಾಷ್ಟ್ರೀಯ ಹೆದ್ದಾರಿ ೬೬ರ ಕಿರು ಸೇತುವೆ ಬಳಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಅಪಘಾತ ವಲಯವಾಗಿ ರೂಪುಗೊಳ್ಳುತ್ತಿದೆ.
ಸೋಮವಾರ ರಾತ್ರಿ ಗೂಡ್ಸ್ ಟೆಂಪೊವೊಂದು ಹೆದ್ದಾರಿಯಲ್ಲಿ ಶೇಕರಣೆಗೊಂಡಿರುವ ನೀರಿನ ಮೇಲಿಂದ ಚಲಿಸಿ ರಸ್ತೆ ವಿಭಜಕವೇರಿ ಮಗುಚಿ ಬಿದ್ದಿದೆ. ಭಾನುವಾರ ರಾತ್ರಿ ಕಾರೊಂದು ಅದೇ ಪ್ರದೇಶದಲ್ಲಿ ಪಲ್ಟಿಯಾಗಿ ನಾಲ್ವರು ಪ್ರಾಣಾಪಾಯದಿಂದ ಪಾರದ ಘಟನೆ ಹಚ್ಚ ಹಸುರಾಗಿರುವಾಗಲೇ ಮತ್ತೆ ಅಪಘಾತ ನಡೆದಿದೆ. ಈ ಅಪಘಾತಕ್ಕೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಎಂಬುದು ಸ್ಪಷ್ಟ, ಮಳೆನೀರು ಹರಿಯಲು ಪೂರಕ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಕೃತಕ ಹೊಳೆ ನಿರ್ಮಾಣಗೊಂಡು ರಾತ್ರಿ ಸಮಯ ಗಮನಕ್ಕೆ ಬಾರದೆ ವಾಹನಗಳು ಅದರ ಮೇಲಿಂದ ಚಲಿಸಿದಾಗ ನಿಯಂತ್ರಣ ತಪ್ಪಿ ಪಕ್ಕದ ರಸ್ತೆ ವಿಭಜಕವೇರಿ ಪಲ್ಟಿಯಾಗುತ್ತಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ, ಈ ಸಮಸ್ಯೆಗೆ ಹೆದ್ದಾರಿ ಇಲಾಖೆ ಸಹಿತ ಈ ಅವೈಜ್ಞಾನಿಕ ರಸ್ತೆಗೆ ಟೋಲು ಸುಲಿಗೆ ಮಾಡುವ ಹೆಜಮಾಡಿ ಟೋಲ್ ಪ್ರಮುಖರು ತುರ್ತು ಗಮನ ಹರಿಸಿ ಸಮಸ್ಯೆ ಪರಿಹಾರ ಮಾಡದೇ ಇದ್ದಲ್ಲಿ ಮುಂದೆ ಸಂಭವಿಸ ಬಹುದಾದ ದುರಂತಕ್ಕೆ ಹೆಗಲು ಕೊಡ ಬೇಕಾದೀತು ಎಂಬುದು ಸಾರ್ವಜನಿಕರ ಎಚ್ಚರಿಕೆ.