ಸಂಪಾಜೆ-ಕೊಯನಾಡು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಯಶ್ವಿನಿ ನದಿ

ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ನಿರಂತರ ಎರಡನೇ ದಿನವೂ ರಾತ್ರಿ ವೇಳೆ ಮಹಾಮಳೆ ಮುಂದುವರಿದಿತ್ತು. ರಾತ್ರಿ ಸುರಿದ ಧಾರಾಕಾರ ಮಳೆಗೆ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು.

ನದಿಪಾತ್ರದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ರಾತ್ರೋರಾತ್ರಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಕೊಯನಾಡಿನಲ್ಲಿ ಕೂಡ ನಿರಂತರ ಮಳೆಯಿಂದ ಆತಂಕ ಸೃಷ್ಟಿಯಾಗಿದೆ. ಹಲವು ಕುಟುಂಬಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪಯಸ್ವಿನಿ ಹಾಗು ಇತರ ನದಿಗಳು ಉಕ್ಕಿ ಹರಿದಿದ್ದು ಸಂಪಾಜೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಲ್ಲುಗುಂಡಿ, ಗೂನಡ್ಕ, ಪೇರಡ್ಕ ಭಾಗದಲ್ಲಿ ನೀರು ನುಗ್ಗಿದೆ. ಕಲ್ಲುಗುಂಡಿ ಪೇಟೆಯಲ್ಲಿ ಭಾರೀ ಪ್ರಮಾಣದಲ್ಲಿ ಅಂಗಡಿ, ಮುಂಗಟ್ಟು ಮನೆಗಳಿಗೆ, ಕೃಷಿಭೂಮಿಗೆ ನೀರು ನುಗ್ಗಿದೆ.

ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿ ನೀರು ನಿಂತಿದ್ದರಿಂದ ಮಡಿಕೇರಿ -ಮಂಗಳೂರು ರಸ್ತೆ ಸಂಚಾರ ಸ್ಥಗಿತವಾಗಿತ್ತು. ಕಲ್ಲುಗುಂಡಿಯ ಪೆಟ್ರೋಲ್ ಬಂಕ್ ಸಮೀಪದವರೆಗೆ ನೀರು ಆವರಿಸಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಗೂನಡ್ಕ, ಪೇರಡ್ಕ ಭಾಗದಲ್ಲಿ ಮನೆಗಳು ಜಲಾವೃತವಾಗಿದ್ದು, ಕೆಲವು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ.
