ಪ್ರಾದೇಶಿಕ ಅಸ್ಮಿತೆ ಬಿಂಬಿಸಿದ ರಂಗ ವೈಖರಿ ಗೋಷ್ಠಿ

ಉಜಿರೆ, ಫೆ.5: ಯಕ್ಷಗಾನ ಭಕ್ತಿ ಪರಂಪರೆಯಿಂದ ಬೆಳೆದು ಬಂದ ಕಲೆ. ಇದು ನಾಟ್ಯಧರ್ಮೀಯ ಹಾಗೂ ಲೋಕಧರ್ಮೀಯ ನೆಲೆಗಳನ್ನು ಹೊಂದಿದೆ ಎಂದು  ಹವ್ಯಾಸಿ ಯಕ್ಷಗಾನ ಕಲಾವಿದ ಮತ್ತು ಉಪನ್ಯಾಸಕ ಸುನಿಲ್ ಪಲ್ಲಮಜಲು ಹೇಳಿದರು.

ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದ ‘ಸಾರಾ ಅಬೂಬಕ್ಕರ್ ವೇದಿಕೆ’ಯಲ್ಲಿ ನಡೆಯುತ್ತಿರುವ 25ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ 4ನೇ ಗೋಷ್ಠಿಯ ‘ರಂಗವೈಖರಿ’ ಕಾರ್ಯಕ್ರಮದಲ್ಲಿ ‘ಯಕ್ಷಗಾನ’ ಕುರಿತು ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು. 

ಮಾತುಗಾರಿಕೆ, ಸಂಗೀತ, ಎಲ್ಲವೂ ಒಟ್ಟಾಗಿ ಮೇಳೈಸಿರುವ ಜಗತ್ತಿನ ಏಕೈಕ ವಿಶೇಷ ಕಲೆ ಯಕ್ಷಗಾನ ಇಂದು ಪ್ರಾದೇಶಿಕ ಕಲೆಯಾಗಿ ಎಲ್ಲೆಡೆ ಗುರುತಿಸಿಕೊಳ್ಳುತ್ತಿದೆ. ಮಧ್ಯಕಾಲೀನ ಯುಗದಲ್ಲಿ ಸಾಧು ಸಂತರು ಒಟ್ಟುಗೂಡಿ ಧರ್ಮ ಪ್ರಚಾರಕ್ಕಾಗಿ ಪ್ರಾದೇಶಿಕವಾಗಿ ಅಸ್ತಿತ್ವದಲ್ಲಿದ್ದ  ಕಲೆಗಳನ್ನು  ಬಳಸಿಕೊಂಡಿದ್ದರಿಂದ  ಇಂದು ಅನೇಕ ಕಲೆಗಳು ಹುಟ್ಟಿಕೊಂಡಿವೆ ಎಂದರು. 

ಯಕ್ಷಗಾನ ಜಾನಪದ, ಸಾಂಪ್ರದಾಯ,  ಶಾಸ್ತ್ರೀಯ ಎಂಬ ಚರ್ಚೆ ಅನೇಕ ದಿನಗಳಿಂದ ನಡೆಯುತ್ತಿದೆ. ಭರತನ ನಾಟ್ಯಶಾಸ್ತ್ರದಿಂದ ಈ ಕಲೆ ಬಂದಿದೆ ಎಂಬ ಅಭಿಪ್ರಾಯವೂ ಕೆಲವರಲ್ಲಿದೆ. ಆದರೆ ನಾಟ್ಯಶಾಸ್ತ್ರ ಎನ್ನುವುದು ಯಕ್ಷಗಾನದಂತಹ ಅನೇಕ ಕಲೆಗಳ ನೆಲೆಯಿಂದ ರೂಪಿತಗೊಂಡಿದೆ ಎಂದು ಹೇಳಿದರು.

ಉತ್ತರಕರ್ನಾಟಕದ ಕೆಲವು ಸಾಂಸ್ಕೃತಿಕ ಕಲೆಗಳು ನಶಿಸುತ್ತಿವೆ ಎಂಬ ಭೀತಿ ಅಲ್ಲಿಯ ಹಿರಿಯರಲ್ಲಿದೆ. ಆದರೆ ಯಕ್ಷಗಾನ  ಇಂದಿಗೂ ಧಾರ್ಮಿಕ ಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತ ಯುವಕರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಈ ಉತ್ಸಾಹ ಯಕ್ಷಗಾನದ ಉಳಿವಿಗೆ ಮೂಲ ಕಾರಣ ಎಂದು ಹರುಷ ವ್ಯಕ್ತಪಡಿಸಿದರು.

‘ನಾಟಕ ‘  ಕುರಿತಾಗಿ ಬೆಳ್ತಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶೀನಾ ನಾಡೋಳಿ ಮಾತನಾಡಿ,  ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ದೇವರು, ದೈವಾರಾಧನಾ ಕೇಂದ್ರ ಮತ್ತು ರಂಗಭೂಮಿಗೆ  ಅವಿನಾಭಾವ ಸಂಬಂಧವಿದೆ. ಇಲ್ಲಿನ ರಂಗಭೂಮಿಯ ಕಥನಗಳು ಹೆಚ್ಚಾಗಿ ದೇವರು ಮತ್ತು ದೈವಗಳ ಕೇಂದ್ರಿತವಾಗಿ ಇವೆ. ಹಾಗಾಗಿ ವಿಭಿನ್ನ ಭಾಷೆ, ಸಂಸ್ಕತಿ, ಆಚಾರ ವಿಚಾರಗಳ  ಸಮ್ಮಿಲನದಿಂದ ಮೂಡಿಬಂದ ರಂಗಭೂಮಿ ನಮ್ಮದು ಎಂದು  ಅಭಿಪ್ರಾಯಪಟ್ಟರು.

ನಾಟಕಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು ಗಮನ ಹರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಕಾರಣವಾಗುತ್ತಿರುವುದು ಉತ್ತಮ ವಿಚಾರ ಎಂದು ಹೇಳಿದರು.

‘ಚಲನಚಿತ್ರ’ ಕುರಿತಂತೆ ಮಾತನಾಡಿದ, ಕಾಟಿಪಳ್ಳದ ಮಿಸ್ಬ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮತಾ ಶೆಟ್ಟಿ, ಆಧುನಿಕ ಯುಗದಲ್ಲಿ ಸಿನಿಮಾ ಒಂದು ಮುಖ್ಯ ಪಾತ್ರ ವಹಿಸುತ್ತದೆ.  ಜಗತ್ತಿನ ಅತ್ಯಂತ ಜನಪ್ರಿಯ ಕಾರ್ಯಕ್ರಮದಲ್ಲಿ ಸಿನಿಮಾ ಕೂಡ ಒಂದು. ಸಿನಿಮಾ ಸಮಾಜಕ್ಕೆ ಹಲವಾರು ಮೌಲ್ಯಯುತ ವಿಚಾರಗಳನ್ನು ಸಾರುತ್ತದೆ ಎಂದರು. 

ಸಿನಿಮಾ ಭಾವನೆ, ಸಂಗೀತ, ಅಭಿನಯ ಹೀಗೆ ಕಲೆಯ ಹಲವು ವೈವಿಧ್ಯಗಳನ್ನು ಒಳಗೊಂಡಿರುತ್ತದೆ. ಕೇವಲ ಮನರಂಜನೆಗೆ ಮಾತ್ರವಲ್ಲ ನಮ್ಮ ಸಮಾಜದ ಮಹತ್ವಪೂರ್ಣ ಮಾಧ್ಯಮವಾಗಿಯೂ ಸಿನಿಮಾ ಕಾರ್ಯನಿರ್ವಹಿಸುತ್ತದೆ ಎಂದರು. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಸಿನಿಮಾ ಕೂಡ ವೇಗವಾಗಿ ಬೆಳೆಯುತ್ತಿದೆ ಎಂಬುದು ಹೆಮ್ಮೆಯ ವಿಚಾರ. ತುಳುನಾಡು ಅಥವ ತುಳು ಸಿನಿಮಾಗಳಿಗೂ ರಂಗಭೂಮಿಗೂ ಅವಿನಾಭಾವ ಸಂಬಂಧವಿದೆ ಹೀಗಾಗಿ ಅದೆಷ್ಟೋ ನಾಟಕಗಳು ಸಿನಿ ಪರದೆಯಲ್ಲಿ ಗುರುತಿಸಿಕೊಂಡಿವೆ ಎಂದರು.

ದಕ್ಷಿಣ ಕನ್ನಡದ ಜನ ಸಂಸ್ಕೃತಿಗೆ ಹೆಚ್ಚು ಒತ್ತನ್ನು ನೀಡುತ್ತಾರೆ. ಇದೇ ಸಂಸ್ಕೃತಿ ಸ್ಫೂರ್ತಿದಾಯಕವಾಗಿ ಸಿನಿಮಾ ರೂಪದಲ್ಲಿ ಹೊರ ಹೊಮ್ಮುತ್ತಿದೆ. ಭಾಷೆ ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸಿನಿಮಾಗಳು ಮೂಡಿಬರುತ್ತವೆ ಎಂದರು.

ಸಿನಿಮಾ ಪ್ರಾದೇಶಿಕವಾಗಿ ಹುಟ್ಟಿ ಬೆಳೆದರೂ ಅದು ಸಿನಿರಂಗದಲ್ಲಿ ತನ್ನದೇ ಆದಂತಹ ಅಸ್ತಿತ್ವವನ್ನು ಕಂಡುಕೊಂಡಿದ್ದು, ಜನಮನ್ನಣೆಯನ್ನು ಗಳಿಸಿಕೊಂಡಿದೆ. ಭಾಷಾವಾರು ಹಂತ ಹಂತವಾಗಿ ಬೆಳೆದ ತುಳುಸಿನಿಮಾ ರಂಗ 53 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ ಎಂದು  ಹರ್ಷವ್ಯಕ್ತಪಡಿಸಿದರು.

ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ವಸಂತಕುಮಾರ್ ಶೆಟ್ಟಿ.  ಬಹುಭಾಷಾ ಕವಿ ಬಿ.ಎಸ್. ಹಸನಬ್ಬ ಅಮ್ಮೆಂಬಳ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ  ಬಳಂಜ ಸ್ವಾಗತಿಸಿ, ಪ್ರಕಾಶ ನಾರಾಯಣ ಚಾರ್ಮಾಡಿ ವಂದಿಸಿದರು.  ಕ.ಸಾ.ಪ. ಕೇಂದ್ರ ಸಮಿತಿಯ ಸದಸ್ಯ ಡಾ. ಮಾಧವ ಮೂಡುಕೊಣಾಜೆ ನಿರೂಪಿಸಿದರು.  

ರಂಗಭೂಮಿ ಹಾಗೂ ಕಲಾ ಪ್ರಕಾರಗಳನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು: ಜೀವನ್ ರಾಂ ಸುಳ್ಯ

ರಂಗವೈಖರಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ  ಮಾತನಾಡಿ, ಕನ್ನಡವನ್ನು ಮಕ್ಕಳಿಗೆ ತಲುಪಿಸಲು ಯಕ್ಷಗಾನ ಶ್ರೇಷ್ಠ ಮಾಧ್ಯಮ ಎಂದರು. ರಂಗಭೂಮಿ ಹಾಗೂ ಕಲಾತ್ಮಕ ಪ್ರಕಾರಗಳನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು ಎಂದು ಅವರು ಪ್ರತಿಪಾದಿಸಿದರು.

ಕ್ಯಾಪ್ಶನ್: DSC 1583: ಹವ್ಯಾಸಿ ಯಕ್ಷಗಾನ ಕಲಾವಿದ ಮತ್ತು ಉಪನ್ಯಾಸಕ ಸುನಿಲ್ ಪಲ್ಲಮಜಲು ಮಾತನಾಡಿದರು.

DSC 1589: ಬೆಳ್ತಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶೀನಾ ನಾಡೋಳಿ ಮಾತನಾಡಿದರು.

DSC 1604: ಮಿಸ್ಬ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮತಾ ಶೆಟ್ಟಿ ಮಾತನಾಡಿದರು.

DSC 1616: ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿದರು.

ವರದಿ: ಐಶ್ವರ್ಯ ಕೋಣನ, ವಿನಿತಾ, ವಿಜಯಕುಮಾರ ಹಿರೇಮಠ, ನಿಶಾಲ್ ಲೋಬೋ

ಚಿತ್ರ : ಶಶಿಧರ ನಾಯ್ಕ, ಸಮರ್ಥ ಭಟ್, 

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

Related Posts

Leave a Reply

Your email address will not be published.