ಸಾಹಿತ್ಯ ಸಮ್ಮೇಳನದಲ್ಲಿ ಮನಸೆಳೆದ ನೃತ್ಯೋತ್ಸವ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಇಪ್ಪತ್ತೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಶುಕ್ರವಾರದಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ ತಂಡ ನೃತ್ಯ ರೂಪಕದ ಮೂಲಕ ಕಲಾ ಆರಾಧಕರನ್ನು ಮೂಕವಿಸ್ಮಿತರನ್ನಾಗಿಸಿತು. ವಿದುಷಿ ಶಾಲಿನಿ ಆತ್ಮಭೂಷಣ ನಿರ್ದೇಶನದಲ್ಲಿ ಹತ್ತೊಂಬತ್ತು ಮಂದಿ ಕಲಾವಿದರು ತಂಡ ತಂಡವಾಗಿ ‘ನೃತ್ಯೋsಹಂ’ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಸರ್ವ ದೇವರ ಸಂತೃಪ್ತಿಗೆಂದು ಪುಷ್ಪಾಂಜಲಿ ಭರತನಾಟ್ಯದ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ‘ಸುಬ್ರಹ್ಮಣ್ಯ ಕೌತುಕಂ’, ‘ನಾರಾಯಣ ಹರಿ’, ‘ಘಮ ಘಮ’, ರಾಷ್ಟ್ರಕವಿ ಕುವೆಂಪು ವಿರಚಿತ ‘ಕುಣಿಯುವಳಾರು’, ದೇವರ ಕಟ್ಟೆ ಹಿರಿಯಮ್ಮನವರ ‘ಇಷ್ಟಲಿಂಗ ದೇವ ಶಿವ’, ಸುಪ್ರಸಿದ್ಧ ಕಾಂತಾರ ಸಿನಿಮಾದ ‘ವರಾಹರೂಪಂ’, ಡಿ. ಶ್ರೀವಾತ್ಸವ ಬೆಂಗಳೂರು ವಿರಚಿತ ‘ಸೂರ್ಯ ಕೌತ್ವಂ’, ಪುರಂದರದಾಸರ ‘ಕಾಗದ ಬಂದಿದೆ’, ಕೊನೆಯದಾಗಿ ಆದಿತಾಳದ ‘ಮಂಗಳಂ’ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಶೇಷವಾಗಿ ಪ್ರಸ್ತುತಪಡಿಸಿದರು.
ಒಟ್ಟು ಹತ್ತು ಹಾಡುಗಳಿಗೆ 60 ನಿಮಿಷಗಳ ಕಾಲ ಕಲಾವಿದರು ನರ್ತಿಸಿದರು. ರಾತ್ರಿಯ ಸಾಂಸ್ಕೃತಿಕ ಸನ್ನಿವೇಶ ಅಲ್ಲಿ ನೆರೆದ ಕನ್ನಡದ ಮನಗಳನ್ನು ತಂಪು ಮಾಡುವಂತೆ ಕಲಾ ಅರ್ಪಣೆ ಮಾಡಲಾಯಿತು. ವರಾಹರೂಪಂ ನೃತ್ಯ ಚಪ್ಪಾಳೆಯ ಸುರಿಮಳೆಯನ್ನೆ ಗಿಟ್ಟಿಸಿತು. ಧಾರ್ಮಿಕ, ಆಧ್ಯಾತ್ಮಿಕ ಹಿನ್ನೆಲೆಯ ಗೀತೆಗಳನ್ನೆ ಹೆಚ್ಚು ಪ್ರಸ್ತುತಪಡಿಸಲಾಯಿತು. ಬಳಿಕ ವಿದುಷಿ ಶಾಲಿನಿ ಆತ್ಮಭೂಷಣ ಅವರು ಎಲ್ಲಾ ಕಲಾವಿದರ ಪರಿಚಯ ಮಾಡಿದರು. ನೃತ್ಯ ನಿರ್ದೇಶಕಿ ಶಾಲಿನಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪುಸ್ತಕ ಸಮರ್ಪಣೆ ಮಾಡುವ ಮೂಲಕ ಗೌರವಿಸಿದರು.