ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಂಭ್ರಮ

ತುಳು ನಾಡು ದೈವ ದೇವರುಗಳ ನೆಲೆಬೀಡು. ತುಳು ನಾಡಿನಲ್ಲಿ ಹೆಜ್ಜೆಗೊಂದರಂತೆ ದೈವಸ್ಥಾನ, ದೇವಸ್ಥಾನಗಳು ಕಾಣಸಿಗುತ್ತವೆ. ಅದರಂತೆ ಸುರತ್ಕಲ್ ಸಮೀಪದ ಅತ್ಯಂತ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಒಂದು ವಾರಗಳ ಕಾಲ ನಡೆಯಲಿದ್ದು ಇಂದು ಪ್ರಾರಂಭವಾಯಿತು. ಅತ್ಯಂತ ಕಾರಣಿಕ ಕ್ಷೇತ್ರ ಎಂದು ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುವುದು ವಿಶೇಷ.

ಮಂಗಳೂರಿನ ಸುರತ್ಕಲ್ ಸಮೀಪದ ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಕಾರ್ಣಿಕ ಕ್ಷೇತ್ರ ಎಂದೇ ಪರಿಗಣಿಸಲಾಗುತ್ತದೆ. ತುಳುವಿನಲ್ಲಿ ಒಂದು ಮಾತಿದೆ ’ಅದು ತಿಗಲೆ ಇತ್ತಿನಾಯಗ್ ತಿಬಾರ್’ ಎಂಬುದು ಶಿಬರೂರು ಅಂದರೆ ತಿಬಾರ್ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದಾರೆ.
ಶಿಬರೂರುಗುತ್ತು ತಿಮತ್ತಿಕರಿಯಾಲ್ ರವರ ಭಕ್ತಿಗೆ ಒಲಿದ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಗಳು ಕೋಳಿ ಮತ್ತು ಹೋರಿ ಮೂಲಕ ಶಿಬರೂರಿಗೆ ಬಂದು ನೆಲೆ ನಿಂತಿದೆ ಎಂಬ ಪ್ರತೀತಿ ಇದೆ.ಊಳ್ಳಾಯ ಮತ್ತು ಕೊಡ ಮಣಿತ್ತಾಯ ದೈವಗಳು, ಭಕ್ತರಿಂದ ಕಾಲ ಕಾಲಕ್ಕೆ ಸೇವೆಗಳನ್ನು ಪಡೆದು ತಮ್ಮ ಕಾರಣಿಕವನ್ನು ತೋರಿಸುತ್ತಿದೆ.

ಅಂದೇ ರಾತ್ರಿ ಕೊಡಮಣಿತ್ತಾಯ ದೈವದ ನೇಮ, ಬಂಡಿ ಉತ್ಸವ, ಮರುದಿನದಿಂದ ಕ್ರಮವಾಗಿ ಕಾಂತೇರಿ ಧೂಮಾವತಿ, ಸರಳ ಧೂಮಾವತಿ, ಜಾರಂದಾಯ ದೈವ, ಕೈಯೂರು ಧೂಮಾವತಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜಾರೋಹಣ ನಡೆಯುತ್ತದೆ. ಧ್ವಜಾರೋಹಣದಿಂದ ಧ್ವಜಾವರೋಹರಣದವರೆಗೆ ಪ್ರತಿನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಈ ದಿನಗಳಲ್ಲಿ ಮಾತ್ರವಲ್ಲದೆ ಪ್ರತೀ ಸಂಕ್ರಮಣಕ್ಕೂ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಶ್ರೀ ದೈವದ ಕೃಪೆಗೆ ಪಾತ್ರರಾಗುತ್ತಾರೆ.
ಶ್ರೀ ಕಟೀಲಿಗೆ ಭೇಟಿ

ಶ್ರೀಕ್ಷೇತ್ರ ಕಟೀಲಿಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅಭೇದ್ಯ ಸಂಬಂಧವಿದೆ. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಶ್ರೀ ಕಟೀಲಿಗೆ ಭೇಟಿ ನೀಡುವ ಕ್ರಮ ಈಗಲೂ ಮುಂದುವರಿದಿದೆ, ಮಾಡುವಂತಹ ಒಂದು ಸಂಪ್ರದಾಯವಿದೆ ಇಂದಿಗೂ ಮುಂದುವರಿದಿದೆ. ತುಳುನಾಡಿನ ಅತ್ಯಂತ ಕಾರಣಿಕದ ಕ್ಷೇತ್ರಗಳಲ್ಲಿ ಶಿಬರೂರು ಕೂಡ ಒಂದಾಗಿದೆ.
ಏತದ ಮೂಲಕ ನೀರು ಎತ್ತುವಿಕೆ
ಶಿಬರೂರು ಕ್ಷೇತ್ರದ ತೀರ್ಥ ಬಹಳ ಪ್ರಸಿದ್ಧಿ ಪಡೆದಿದೆ. ಹಿಂದಿನ ಕಾಲದಲ್ಲಿ ಸೂರಿಂಜೆ ಗುತ್ತು ತ್ಯಾಂಪ ಶೆಟ್ಟಿ ಎಂಬುವವರ ಬಳಿ ವಿಷವನ್ನು ಹೀರುವ ಕಲ್ಲು ಇದ್ದು ಅವರು ಎಲ್ಲರಿಗೂ ಉಪಯೋಗವಾಗಲಿ ಎಂಬ ಕಾರಣಕ್ಕೆ ಆ ಕಲ್ಲನ್ನು ಶಿಬರೂರು ದೈವಸ್ಥಾನದ ಎದುರಿನ ಬಾವಿಗೆ ಹಾಕಿದ್ದು, ಮುಂದಕ್ಕೆ ಆ ಬಾವಿಯ ನೀರು ವಿಷವನ್ನು ಹೀರುವ ಗುಣವನ್ನು ಪಡೆದಿದೆ ಎಂಬ ನಂಬಿಗೆ ಇಂದಿಗೂ ಮುಂದುವರಿದಿದೆ.
ಹಿಂದಿನ ಕಾಲದಲ್ಲಿ ವಿಷ ಜಂತುಗಳು ಕಚ್ಚಿದಲ್ಲಿ ಕ್ಷೇತ್ರದ ಮಣ್ಣು ಮತ್ತು ಇಲ್ಲಿನ ತೀರ್ಥ ಕುಡಿದರೆ, ವಿಷ ಕಡಿಮೆ ಆಗಿ ಸಮಸ್ಯೆ ಪರಿಹಾರವಾಗುತ್ತಿದ್ದ ಕ್ಷಣವನ್ನು ಕಣ್ಣಾರೆ ಕಂಡ ಹಿರಿಯರು ಈಗಲೂ ನೆನಪಿಸುತ್ತಾರೆ. ಅದಕ್ಕಾಗಿ ಇಂದಿಗೂ ಇಲ್ಲಿನ ತೀರ್ಥ ಮತ್ತು ಮಣ್ಣು ಭಕ್ತರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲಿನ ಈ ತೀರ್ಥ ಬಾವಿಗೆ ಕೊಡಪಾನ ಅಥವಾ ಪಂಪು ಮೂಲಕ ನೀರನ್ನು ಎತ್ತುವಂತಿಲ್ಲ. ಅದರ ಬದಲು ಏತದ ಮೂಲಕವೇ ನೀರನ್ನು ಎತ್ತುದು ಇಲ್ಲಿನ ವಿಶೇಷ.