ಉಳ್ಳಾಲ : ಶಿಕ್ಷಣ ಕಾಶಿಯಲ್ಲಿ ಉದ್ಯೋಗದ ವಿಚಾರಗಳೇ ಇಲ್ಲ- ದಿನಕರ್ ಉಳ್ಳಾಲ್

ಉಳ್ಳಾಲ: ನೈರುತ್ಯ ಕ್ಷೇತ್ರ ಶಿಕ್ಷಣ ಕಾಶಿಯಾಗಿಯೇ ಮುಂದುವರಿಯುತ್ತಿದೆ ಹೊರತು ಉದ್ಯೋಗ ನೀಡುವ ಯಾವುದೇ ಸಂಸ್ಥೆಗಳು ಇಲ್ಲಿ ಆರಂಭವಾಗುತ್ತಿಲ್ಲ. ಪದವೀಧರರಿಗೆ ನಿರುದ್ಯೋಗದ ಸಮಸ್ಯೆ ಜ್ವಲಂತ ಇದ್ದರೂ ವಿಧಾನಸಭೆಯಲ್ಲಿ ಚರ್ಚೆಗಳೇ ಆಗದೇ ಅನಾವಶ್ಯಕ ವಿಚಾರಗಳೇ ಮೇಳೈಸುತ್ತಿವೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಿನಕರ್ ಉಳ್ಳಾಲ್ ಹೇಳಿದರು.

ಕುತ್ತಾರು ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಣ, ಜಾತಿ, ಪ್ರಭಾವದಿಂದ ಈವರೆಗಿನ ಪದವೀಧರರ ಕ್ಷೇತ್ರದ ಅಭ್ಯರ್ಥಿಗಳು ಆಯ್ಕೆಗೊಂಡ ಪರಿಣಾಮ ಪದವೀಧರರ ಸಮಸ್ಯೆಗಳು ದುಪ್ಪಟ್ಟಾಗಿವೆ. ಸದ್ಯ ಪ್ರಜ್ಞಾವಂತರು ಚುನಾವಣೆ ಸ್ಪರ್ಧಿಸಿದಲ್ಲಿ ವಿಧಾನಸಭೆಯಲ್ಲಿ ನ್ಯಾಯದ ಪರ ಧ್ವನಿ ಎತ್ತಲು ಸಾಧ್ಯ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ೧೫ ಲಕ್ಷ ಪದವೀಧರರು ಇದ್ದರೂ 82,000 ಮಾತ್ರ ಮತದಾರರು ನೋಂದಾವಣೆಗೊಂಡಿದ್ದಾರೆ. ಕ್ಷೇತ್ರದಲ್ಲಿ ಎರಡು ಪಕ್ಷಗಳಲ್ಲಿಯೂ ಬಂಡಾಯ ಇದ್ದು, ಪಕ್ಷೇತರನಾಗಿ ನಿಂತಿರುವ ತಾನು ಎಲ್ಲರಿಗೂ ದನಿಯಾಗುವ ವಿಶ್ವಾಸ ನೀಡುತ್ತೇನೆ. ನಿರುದ್ಯೋಗ, ಉದ್ಯೋಗ ಸೃಷ್ಟಿಗೆ ಯಾರೂ ಈವರೆಗೆ ಆಯ್ಕೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಉನ್ನತ ವ್ಯಾಸಾಂಗ, ಪದವಿ ಪಡೆದವರು ವಿದೇಶ, ಹೊರಜಿಲ್ಲೆಗಳಿಗೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ವಿದೇಶಗಳಲ್ಲಿ ಅರ್ಹತೆ ತಕ್ಕ ಉದ್ಯೋಗವೂ ಸಿಗದೆ ದುಡಿಯುವ ಪರಿಸ್ಥಿತಿಯಿದೆ. ಐಟಿ ಉದ್ಯಮವೂ ಶಾಶ್ವತವಲ್ಲ, ತಾಂತ್ರಿಕ ಕೃಷಿಯತ್ತ ಪದವೀಧರರನ್ನು ಓಲೈಸುವ ಸಕಲ ಪ್ರಯತ್ನ ಮಾಡಬೇಕಿದೆ ಎಂದ ಅವರು, ಈವರೆಗೆ ವಿಧಾನಪರಿಷತ್ ಸದಸ್ಯರಾಗಿ ಶಿವಮೊಗ್ಗದವರೇ ಜಯಿಸುತ್ತಿದ್ದು, ಈ ಬಾರಿಯಾದರೂ ಮಂಗಳೂರಿನ ವ್ಯಕ್ತಿಗೆ ಪದವೀಧರರು ಬೆಂಬಲಿಸಬೇಕಿದೆ.
ಸುದ್ಧಿಗೋಷ್ಠಿಯಲ್ಲಿ ಉಳ್ಳಾಲ ನಗರಸಭೆ ಸದಸ್ಯರುಗಳಾದ ಮುಷ್ತಾಕ್ ಪಟ್ಲ, ಅಬ್ದುಲ್ ಜಬ್ಬಾರ್, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.