ಸುರತ್ಕಲ್ ಟೋಲ್‍ಗೇಟ್ ಎತ್ತಂಗಡಿ ಆಗುವುದು ನಿಶ್ಚಿತ : ಪ್ರತಿಭಾ ಕುಳಾಯಿ
ಮಂಗಳೂರು: ಸುರತ್ಕಲ್ ಟೋಲ್‍ಗೇಟ್ ತೆರವಿಗೆ ಹಲವು ವರ್ಷಗಳಿಂದ ಪ್ರತಿಭಟನೆ, ಹೋರಾಟ ನಡೆಯುತ್ತಿದ್ದು, ನೂರಾರು ಸಮಾನಮನಸ್ಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಜೊತೆ ಸೇರಿ ಸ್ಥಾಪಿಸಿರುವ ಟೋಲ್ ಗೇಟ್ ವಿರೋಧಿ ಸಮಿತಿ ನಡೆಸಿರುವ ಹೋರಾಟಕ್ಕೆ ಸದ್ಯದಲ್ಲೇ ಗೆಲುವು ಸಿಗಲಿದೆ. ಕೆಲವೇ ಸಮಯದಲ್ಲಿ ಟೋಲ್ ಅಲ್ಲಿಂದ ಎತ್ತಂಗಡಿ ಆಗುವುದು ನಿಶ್ಚಿತ. ಟೋಲ್ ಗೇಟ್ ನಲ್ಲಿ 31ಕ್ಕೂ ಹೆಚ್ಚು ಮಂದಿ ಯುವಕ-ಯುವತಿಯರು ಕೆಲಸ ಮಾಡುತ್ತಿದ್ದು ಟೋಲ್ ತೆರವುಗೊಂಡರೆ ಅವರ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಲಿದೆ. ಇದನ್ನು ಮನಗಂಡು ಅವರಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ನೀಡುವ ಭರವಸೆಯನ್ನು ನಾನು ನೀಡುತ್ತೇನೆ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತಾಡಿದ ಅವರು “ಸುರತ್ಕಲ್ ಟೋಲ್ ಗೇಟ್ ನಲ್ಲಿ ಒಟ್ಟು 31 ಮಂದಿ ಕಾರ್ಮಿಕರು ದುಡಿಯುತ್ತಿದ್ದು ಅವರಲ್ಲಿ ಯುವಕ-ಯುವತಿಯರು ಸೇರಿದ್ದಾರೆ. ಟೋಲ್ ತೆರವುಗೊಳ್ಳುವುದರಿಂದ ಅವರು ಉದ್ಯೋಗ ಕಳೆದುಕೊಳ್ಳಲಿದ್ದು ಕುಟುಂಬಕ್ಕೆ ಆರ್ಥಿಕ ಹೊರೆಬೀಳಲಿದೆ. ಇದನ್ನು ಮನಗಂಡು ಅವರಿಗೆ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಲು ಈಗಾಗಲೇ ವಿವಿಧ ಕಂಪೆನಿಗಳು ಮತ್ತು ಉದ್ಯಮಿಗಳ ಜೊತೆ ಚರ್ಚಿಸಿದ್ದೇನೆ” ಎಂದು ಪ್ರತಿಭಾ ಹೇಳಿದರು. ಈಗಾಗಲೇ ಟೋಲ್ ಗೇಟ್ ನಲ್ಲಿ ದುಡಿಯುತ್ತಿರುವ ಕಾರ್ಮಿಕರ ಮೇಲೆ ಹತ್ತಾರು ಕ್ರಿಮಿನಲ್ ಕೇಸ್ ಗಳಿದ್ದು ಟೋಲ್ ತೆರವುಗೊಂಡ ಬಳಿಕ ಅತಂತ್ರ ಸ್ಥಿತಿ ಎದುರಿಸಲಿದ್ದಾರೆ. ಕಾರ್ಮಿಕರು ಮತ್ತವರ ಕುಟುಂಬ ಸದಸ್ಯರು ಸಂಪರ್ಕದಲ್ಲಿದ್ದು ಟೋಲ್ ತೆರವುಗೊಂಡ ತಕ್ಷಣ ಅವರ ಉದ್ಯೋಗ ಭದ್ರತೆಗೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದರು.