ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು: ಡಾ. ಜಗದೀಶ್ ಬಾಳ

ಉಜಿರೆ, : ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಅಭಿವೃದ್ಧಿ ಮಾತ್ರ ಸುಸ್ಥಿರ ಅಭಿವೃದ್ಧಿ ಎಂದು ಪರಿಗಣಿಸಲ್ಪಡುತ್ತದೆ. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು ಎಂದು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಬಾಳ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಅವರು ‘ಪರಿಸರ ಮತ್ತು ಜೀವಸಂಕುಲಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

“ಪರಿಸರ ನಮ್ಮ ಹಿರಿಯರಿಂದ ಸಿಕ್ಕ ಬಳುವಳಿ. ಅದನ್ನು ಅದೇ ರೀತಿಯಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದು. ಆದರೆ ಅಂತಹ ಕಾರ್ಯ ನಡೆಯುತ್ತಿಲ್ಲ. ಇಂದು ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿ ನಡೆಯುತ್ತಿಲ್ಲ ಬದಲಾಗಿ ಅನಾಹುತದ ದಾರಿಯಾಗುತ್ತಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಎಲ್ಲರೂ ಹೊಣೆ. ಮೊದಲೆಲ್ಲ ಹಳ್ಳಿಗರಿಗೆ ಪ್ರಕೃತಿಯ ಜೊತೆಗೆ ಸಂಬಂಧ ಉತ್ತಮವಾಗಿತ್ತು. ಪ್ರಾಕೃತಿಕ ಬದಲಾವಣೆಗಳು ಮೊದಲೇ ಅರಿವಿಗೆ ಬರುತ್ತಿತ್ತು. ಆದರೆ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಎಲ್ಲವೂ ಬದಲಾಗಿದೆ. ಪ್ರಕೃತಿ ಮತ್ತು ಮಾನವನ ಜೊತೆಗಿನ ಬಾಂಧವ್ಯ ಹದಗೆಟ್ಟಿದೆ ಎಂದು ಎಚ್ಚರಿಸಿದ ಅವರು, ಮಾನವರು ವೈಜ್ಞಾನಿಕವಾಗಿ ಮುಂದುವರಿದರೂ ಅಭಿವೃದ್ಧಿಯ ಜೊತೆಗೆ ಪರಿಸರದೊಂದಿಗೆ ಸಹಬಾಳ್ವೆ ನಡೆಸಬೇಕಿದೆ ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ ಇಂದಿನ ಹಾಸ್ಯಾಸ್ಪದ ಬೆಳವಣಿಗೆ ಎಂದರೆ ನವೀಕರಿಸಬಹುದಾಗಿರುವ ವಿದ್ಯುತ್ ಶಕ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಪ್ರಕೃತಿ ಸಂಪನ್ಮೂಲವಾದ ನೀರನ್ನು ಉಳಿಸುವ ನಿಟ್ಟಿನಲ್ಲಿ ಕೇವಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಾಲದು. ಅದನ್ನು ಉಳಿಸುವ ನಿಟ್ಟಿನಲ್ಲಿಯೂ ಕಾರ್ಯಗಳು ನಡೆಯಬೇಕು. ಒಂದು ಹನಿಯನ್ನೂ ಉತ್ಪಾದಿಸಲು ಯೋಗ್ಯತೆಯಿಲ್ಲದ ಮಾನವ ದುಡ್ಡು ಕೊಟ್ಟು ನೀರನ್ನು ಖರೀದಿಸಿ ವ್ಯಯ ಮಾಡುತ್ತಿದ್ದಾನೆ ಎಂದು ಅವರು ಟೀಕಿಸಿದರು.

ನೀರಿನ ಮೂಲಗಳಾದ ನದಿ ಕೆರೆಗಳೆಲ್ಲವೂ ಈಗಿನ ಪ್ರತಿಯೊಂದು ಕಾರ್ಯಗಳಿಗೂ ಬೇಕು. ಆದರೆ ಅವುಗಳನ್ನು ಸಂರಕ್ಷಿಸುವ ಒಂದು ದೃಢವಾದ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ. ಬದಲಾಗಿ, ಬತ್ತಿಹೋದ ನದಿಗಳ ಮೇಲೆ ಗೋರಿ ಕಟ್ಟಿದ ರೀತಿಯಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿವೆ ಮತ್ತು ಅಲ್ಲಿನ ನೀರಿನ ವ್ಯವಸ್ಥೆಗಾಗಿ ಪ್ರಕೃತಿ ಸಹಜವಾಗಿ ಹರಿಯುತ್ತಿರುವ ನದಿಗಳನ್ನು ತಿರುಗಿಸುವ ಅವೈಜ್ಞಾನಿಕ ಯೋಜನೆಗಳು ಜಾರಿಯಾಗುತ್ತಿವೆ ಎಂದು ಅವರು ವಿಷಾದಿಸಿದರು.

ಕರಾವಳಿಯ ಪ್ರಮುಖ ಆಚರಣೆಗಳಲ್ಲೊಂದಾದ ನಾಗಾರಾಧನೆ ಪ್ರಾಕೃತಿಕವಾಗಿ ಬನದ ಪರಿಕಲ್ಪನೆಯೊಳಗೆ ಇರುತ್ತಿತ್ತು. ಒಂದು ಒಣಗಿದ ರೆಂಬೆಯನ್ನು ಕಡಿಯಬೇಕಾದರೂ ಪ್ರಶ್ನೆಯಿಡಬೇಕಾಗಿತ್ತು. ಆದರೆ ಇಂದಿನ ದಿನಮಾನದಲ್ಲಿ ನಾಗನ ಕಲ್ಲುಗಳನ್ನು ಸಿಮೆಂಟ್ ಪೆಟ್ಟಿಗೆಯೊಳಗೆ ಇರಿಸಲಾಗುತ್ತಿದೆ. ಇದು ಅಭಿವೃದ್ಧಿಯ ಪರಿಕಲ್ಪನೆ ಎನಿಸಿಕೊಳ್ಳುವುದಿಲ್ಲ. ಆದ್ದರಿಂದ ಪ್ರಕೃತಿಯ ಅಚ್ಚುಕಟ್ಟಾದ ವ್ಯವಸ್ಥೆಯಾದ ಗಿಡಮರಗಳನ್ನು ಉಳಿಸುವ ಜವಾಬ್ದಾರಿ ನಮ್ಮದು ಎಂದು ಅವರು ತಿಳಿಸಿದರು.

ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹೆಚ್.ಜಿ. ಶ್ರೀಧರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.