ರೈಲ್ವೇ ಗೋಡೌನ್‍ನಿಂದ ಲಕ್ಷಾಂತರ ಬೆಲೆಯ ತಂತಿ ಕಳವು ,ತಂತಿ ಸಾಗಾಟ ನಡೆಸುತ್ತಿದ್ದ ಟೆಂಪೋ ಪಲ್ಟಿ
ಉಳ್ಳಾಲ: ರೈಲ್ವೇ ಇಲಾಖೆ ಗೋಡೌನ್ನಲ್ಲಿರಿಸಲಾದ ಲಕ್ಷಾಂತರ ಬೆಲೆಬಾಳುವ ವಿದ್ಯುತ್ ತಂತಿ ಕಳವು ನಡೆಸಿ ಪರಾರಿಯಾಗುತ್ತಿದ್ದ ಟೆಂಪೋವಾಹನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉರುಳಿಬಿದ್ದು ಇಬ್ಬರು ಮಹಿಳೆಯರು ಹಾಗೂ ಓರ್ವ ಯುವಕ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಟೆಂಪೋ ಚಾಲಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ತಮಿಳುನಾಡು ಮೂಲದವರಾದ ಸೂಟರ್ ಪೇಟೆಯಲ್ಲಿರುವ ವೆಂಕಟೇಶ, ಹೊಯ್ಗೆ ಬಝಾರಿನಲ್ಲಿರುವ ಜಯಲಕ್ಷ್ಮೀ, ನಂದಿನಿ ಹಾಗೂ ಮುಲ್ಕಿಯಲ್ಲಿರುವ ರಾಜ್ ಕುಮಾರ್ ಟೆಂಪೋ ದಲ್ಲಿದ್ದವರು. ಇಬ್ಬರು ಮಹಿಳೆಯರು ಹಾಗೂ ವೆಂಕಟೇಶನ ಮೇಲೆ ಈ ಹಿಂದೆಯೇ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣವಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ವೆಂಕಟೇಶನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆನಂತರ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಟೆಂಪೋದಲ್ಲಿದ್ದ ತಂತಿಯ ಒಟ್ಟು ಮೌಲ್ಯ ರೂ.3.5 ಲಕ್ಷದ್ದಾಗಿದೆ. ರೈಲ್ವೇ ಸೊತ್ತುಗಳು ಕಳವು ಜಾಲದಲ್ಲಿ ದೊಡ್ಡ ಮಾಫಿಯಾ ಕಾರ್ಯಾಚರಿಸುತ್ತಿದ್ದು, ರೈಲ್ವೇ ಪೊಲೀಸರು ಕಾರ್ಯಪ್ರವೃತ್ತವಾಗಿ ತಂಡವನ್ನು ಪತ್ತೆಹಚ್ಚಬೇಕಾಗಿದೆ.