ಒಂದೇ ಗ್ರಾಮದಿಂದ ಏಕಕಾಲದಲ್ಲಿ 150 ಗ್ರಾಮಸ್ಥರಿಂದ ಕಾಂತಾರ ವೀಕ್ಷಣೆ
ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಾ, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ ಮುನ್ನುಗುತ್ತಿರುವ ಕಾಂತರ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಪೂರೈಸಿದ್ದು, ಚಿತ್ರಮಂದಿರ ಈಗಲೂ ಹೌಸ್‌ಫುಲ್ ಆಗಿದೆ. ಮತ್ತೊಂದೆಡೆ ಗ್ರಾಮದ ಜನರೆಲ್ಲಾ ಚಿತ್ರ ವೀಕ್ಷಿಸಲು ಜೊತೆಯಾಗಿ ತೆರಳುವ ಸನ್ನಿವೇಷ ನಡೆದಿದೆ. ಇಂತಹ ವಿಶೇಷ ಘಟನೆಗೆ ಮಂಗಳೂರಿನ ಚಿತ್ರಮಂದಿರ ಸಾಕ್ಷಿಯಾಗಿದೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ 150 ಮಂದಿ ಗ್ರಾಮಸ್ಥರು ಏಕಕಾಲದಲ್ಲಿ ಜತೆಯಾಗಿ ಚಿತ್ರ ವೀಕ್ಷಿಸಿ ಹೊಸ ದಾಖಲೆ ಬರೆದಿದ್ದಾರೆ. ತುಂಬೆ ಬೊಳ್ಳಾರಿಯ ಆಶೀರ್ವಾದ ಸೇವಾ ಸಂಘ ಹಾಗೂ ಆಶೀರ್ವಾದ ಮಹಿಳಾ ಸಂಘ ತಮ್ಮೂರಿನ ಜನರಿಗೆ ಕಾಂತರ ಸಿನಿಮಾ ವೀಕ್ಷಿಸಲು ಈ ಅವಕಾಶವನ್ನು ಒದಗಿಸಿದೆ. ಮಂಗಳೂರಿನ ಚಿತ್ರಮಂದಿರದಲ್ಲಿ ಗ್ರಾಮಸ್ಥರು ಜೊತೆಯಾಗಿ ಚಿತ್ರ ವೀಕ್ಷಿಸಿ ಕಾಂತಾರಾ ಕಣ್ತುಂಬಿಕೊoಡಿದ್ದಾರೆ.
ತುಂಬೆ ಗ್ರಾಮದ 150 ಮಂದಿ ಕಾಂತಾರ ಚಿತ್ರ ವೀಕ್ಷಿಸಲು ಬಂದಿರುವ ಸುದ್ದಿ ತಿಳಿದು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಲಾವಿರಾದ ಪ್ರಕಾಶ್ ತೂಮಿನಾಡು, ಮೈಮ್ ರಾಮದಾಸ್, ಸನಿಲ್ ಗುರು ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿ ತಂಡದೊAದಿಗೆ ಮಾತು ಕತೆ ನಡೆಸಿ ಗ್ರಾಮಸ್ಥರು ಜೊತೆಯಾಗಿ ಕಾಂತಾರ ಚಿತ್ರ ನೋಡುವ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಆಶೀರ್ವಾದ್ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಸುವರ್ಣ, ಅಧ್ಯಕ್ಷ ಸುಶಾನ್ ಆಚಾರ್ಯ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಲಕ್ಷ್ಮೀ ಮಹೇಶ್ ಹಾಗೂ ಅಧ್ಯಕ್ಷೆ ಪಾರ್ವತಿ ಐತಪ್ಪ ಕುಲಾಲ್ ಅವರು ಉಪಸ್ಥಿತರಿದ್ದರು.
ವರದಿ: ಸಂದೀಪ್