ಅಧಿಕಾರಿಗಳ ಬೇಜಾಬ್ದಾರಿತನದಿಂದ ಭೂದಾಖಲೆಗಳು ನಾಪತ್ತೆ
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಭೂದಾಖಲೆಗಳು ಕಾಣೆಯಾಗುತ್ತಿವೆ! ಅಧಿಕಾರಿಗಳ ಬೇಜವಾಬ್ದಾರಿ ಇದಕ್ಕೆ ಕಾರಣ ಮತ್ತು ಆ ಮೂಲಕ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಆದುದರಿಂದ ನಾಪತ್ತೆಯಾದ ನಮ್ಮ ಕಡತಗಳನ್ನು ಹುಡುಕಿ ಕೊಡಬೇಕೆಂದು ವಿಟ್ಲದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಆಗ್ರಹಿಸಿದೆ .ವಿಟ್ಲದ ಪ್ರೆಸ್‌ಕ್ಲಬ್‌ನಲ್ಲಿ ವಿಟ್ಲದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ತಹಶೀಲ್ದಾರರಿಗೆ, ಸಹಾಯಕ ಉಪ ಆಯುಕ್ತರಿಗೆ ದೂರು ನೀಡಲಾಗಿದೆ. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಹೇಳಿದರು.ಪೆರುವಾಯಿ ಗ್ರಾಮದ ಸರಕಾರಿ ಶಾಲೆ ಕಡತ, ವಿಟ್ಲಕಸಬಾ ಗ್ರಾಮದ ಹಕ್ಕುಪತ್ರ ಕಡತ, ಕೆದಿಲ ಗ್ರಾಮದ ಬಡೆಕ್ಕಿಲ ಪರಿಶಿಷ್ಟ ಜಾತಿಯ ವ್ಯಕ್ತಿಯ ಕಡತ, ಕೇಪು ಗ್ರಾಮದ ವ್ಯಕ್ತಿಯ ಕಡತ, ವೀರಕಂಭ ಗ್ರಾಮದ ಮಹಿಳೆಯ ಕಡತ ಮತ್ತು ಇನ್ನೂ ಅನೇಕ ಕಡತಗಳು ತಾಲೂಕು ಕಚೇರಿಯಲ್ಲಿ ಸಿಗುತ್ತಿಲ್ಲ ಎಂದು ಅವರು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಮಾರಪ್ಪ ಸುವರ್ಣ, ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.