ಎಕ್ಕಾರಿನಲ್ಲಿ ಸಾಂಪ್ರದಾಯಿಕ ಪೂಕರೆ ಕಂಬಳ

ಬಜಪೆ : ತುಳುನಾಡಿನ ರೈತರು ಅಪಾರ ದೈವ ನಂಬಿಕೆಯನ್ನು ಹೊಂದಿರುವವರು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವುದೇ ದೈವ ದೇವರುಗಳ ಆರಾಧನೆಯಿಂದ. ತಾವು ಬೆಳೆಯುವ ಮೂರು ಬೆಳೆಗಳ ಮಧ್ಯೆ ಕೃಷಿಯ ಆರಾಧನೆಗಳು ನಡೆಯುತ್ತಾ ಇರುತ್ತದೆ.ಇಂತಹ ಆರಾಧನೆಗಳಲ್ಲಿ ಸುಗ್ಗಿ ಬೆಳೆಯ ಪ್ರಾರಂಭದಲ್ಲಿ ಆಚರಿಸುವ ಪೂಕರೆ ಕಂಬಳವು ಒಂದು. ಅತೀ ಪುರಾತನವಾದ ಪೂಕರೆ ಕಂಬಳವನ್ನು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಎಕ್ಕಾರು ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೂಕ್ತೇಸರರಾದ ಕಾವೆರಮನೆ ನಿತಿನ್ ಹೆಗ್ಡೆ (ತಿಮ್ಮ ಕಾವ)ಕೊಡಮಣಿತ್ತಾಯ ಕ್ಷೇತ್ರದ ಭಂಡಾರಮನೆಯಾದ ಕಾವೆರ ಮನೆಯ ಮುಂದೆ ಕಂಬಳದ ಗದ್ದೆಯೂ ಇದ್ದು ಗ್ರಾಮದ ಪೂರೋಹಿತರಾದ ವೇದಮೂರ್ತಿ ಹರಿದಾಸ ಉಡುಪರು ಸೂಚಿಸಿದ ದಿನದಂದು ಪೂಕರೆ ಕಂಬಳ ನಡೆಯುತ್ತದೆ.

ಪೂಕರೆಗೆ ಮೊದಲು ಕಂಬಳದ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ಹದಮಾಡಿ ಇಡಲಾಗುತ್ತದೆ. ಪೂಕರೆ ನಡೆಯುವ ದಿನ ಬೆಳ್ಳಿಗ್ಗೆ ಗ್ರಾಮಕ್ಕೆ ಸಂಬಂಧಪಟ್ಟ ವಿಶ್ವಕರ್ಮರು ಕಾವೆರ ಮನೆಗೆ ಬಂದು ಒಂದು ಅಡಿಕೆ ಮರವನ್ನು ಕಡಿದು ಅದರಿಂದ ಪೂಕರೆಯನ್ನು ನಿರ್ಮಿಸುತ್ತಾರೆ. ಪೂಕರೆಯ ತುದಿಗೆ ಹಲಸಿನ ಮರದಿಂದ ತಯಾರಿಸಿದ ಶಿಖರವನ್ನು ಇಟ್ಟು, ಕೇಪಳದ ಹೂ ಮತ್ತು ಹಿಂಗಾರದಿಂದ ಅದನ್ನು ಶೃಂಗಾರ ಮಾಡಲಾಗುತ್ತದೆ. ನಾಲ್ಕು ಕಡೆಗಳ ಗುರಿಕಾರರು, ಕ್ಷೇತ್ರಕ್ಕೆ ಸಂಬಂಧಪಟ್ಟವರು ಮತ್ತು ಗ್ರಾಮಸ್ಥರು ಕಾವೆರ ಮನೆಗೆ ಆಗಮಿಸುತ್ತಾರೆ. ಬಂದ ಎಲ್ಲಾ ಜನರಿಗೂ ವೀಳ್ಯದೆಲೆ ಮತ್ತು ಅಡಿಕೆ ಕೊಟ್ಟು ಸ್ವಾಗತಿಸಲಾಗುತ್ತದೆ. ದೈವದ ಮುಂದೆ ಎಲ್ಲರೂ ನಿಂತು ಪ್ರಾರ್ಥನೆ ಮಾಡುತ್ತಾರೆ. ನಂತರ ವಾದ್ಯ, ಬ್ಯಾಂಡ್, ಡೋಲು ವಾದನದೊಂದಿಗೆ ಎಲ್ಲಾ ಜಾತಿಯವರು ಸೇರಿ ಪೂಕರೆಯನ್ನು ಹೆಗಲಲ್ಲಿ ಹೊತ್ತಕೊಂಡು ಕಂಬಳದ ಗದ್ದೆಯ ಕಡೆ ಸಾಗುತ್ತಾರೆ. ಗದ್ದೆಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಗದ್ದೆಯ ಮಧ್ಯ ಭಾಗದಲ್ಲಿ ಇರುವ ಏಕಶಿಲಾ ದಂಬೆಕಲ್ಲಿಗೆ ಇಟ್ಟು ಪ್ರದಕ್ಷಿಣೆ ಹಾಕುತ್ತಾರೆ ನಂತರ ಪೂಜೆ ಸಲ್ಲಿಸಿ ಪೂಕರೆಯನ್ನು ನೇರವಾಗಿ ದಂಬೆಕಲ್ಲಿನಲ್ಲಿ ನೆಡಲಾಗುತ್ತದೆ. ನಂತರ ಅತಿಕಾರ ಬಿದೆಯ ನೇಜಿಯನ್ನು ಗದ್ದೆಗೆ ನೆಡಲಾಗುತ್ತದೆ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆಯು ನಡೆಯುತ್ತದೆ.

ಇದು ಒಂದು ಕೃಷಿ ಆರಾಧನೆಯಾಗಿದ್ದು ಆಧುನಿಕ ಕಾಲದಲ್ಲಿ ಎಲ್ಲಾ ಕಟ್ಟುಕಟ್ಟಳೆಗಳನ್ನು ನಡೆಸಲು ಸಾಧ್ಯವಿಲ್ಲದಿದ್ದರೂ ಮೂಲ ಆಚರಣೆಗೆ ಚ್ಯುತಿ ಬಾರದಂತೆ ಅತೀ ಪುರಾತನವಾದ ಈ ಅಚರಣೆ ನಡೆದುಕೊಂಡು ಬರುತಿರುವುದು ಅಲ್ಲದೆ ಕಂಬಳದಲ್ಲಿ ಬರುವ ಧಾರ್ಮಿಕ ಪ್ರಕ್ರಿಯೆಗಳು ನಡೆದುಕೊಂಡು ಬರುತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ(ತಿಮ್ಮ ಕಾವ),ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು,ರತ್ನಾಕರ ಶೆಟ್ಟಿ ಬಡಾಕರೆ ಬಾಳಿಕೆ,ಸಂತೋಷ್ ಭಂಡಾರಿ ಮೇಲೆಕ್ಕಾರು,ಮಹೇಂದ್ರ ಶೆಟ್ಟಿ ಗೋವಾ,ಸದಾನಂದ ಮೊಯಿಲಿ,ಆದರ್ಶ್ ಶೆಟ್ಟಿ ಎಕ್ಕಾರು,ಪ್ರಕಾಶ್ ಕುಕ್ಯಾನ್ ,ಸುದೀಪ್ ಅಮೀನ್,ಪ್ರದೀಪ್ ಶೆಟ್ಟಿ ಎಕ್ಕಾರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Related Posts

Leave a Reply

Your email address will not be published.