ಮನೆ ಟೆರೇಸ್ನಲ್ಲಿ ಆಟವಾಡುತಿದ್ದ ಬಾಲಕ ವಿದ್ಯುತ್ ಶಾಕ್ ತಗಲಿ ಮೃತ್ಯು
ಮಂಜೇಶ್ವರ: ಮನೆ ಟೆರೇಸ್ ನಲ್ಲಿ ಆಟವಾಡುತಿದ್ದ ಹತ್ತು ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ್ದಾನೆ. ಮೀಂಜ ಮೊರತ್ತಣೆ ಆಟೋ ಚಾಲಕ ಸದಾಶಿವ ಶೆಟ್ಟಿ- ಯಶೋಧ ದಂಪತಿಗಳ ಪುತ್ರ ಮೊಕ್ಷಿತ್ ರಾಜ್ ಸಾವನ್ನಪ್ಪಿದ ದುರ್ದೈವಿ.
ತಲೇಕ್ಕಲ ಸರಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ಮೋಕ್ಷಿತ್ ರಾಜ್ ಆಟವಾಡುತಿದ್ದ ಟೆರೇಸ್ ಮೇಲಿನಿಂದ ಪಕ್ಕದ ಮನೆಗೆ ಹಾಕಲಾಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದಾಗ ಶಾಕ್ ತಗಲಿ ಟೆರೇಸ್ ನ ಕೆಳಗೆ ಬಿದ್ದು ಸಾವು ಸಂಭವಿಸಿದೆ.
ಕೆಳಗೆ ಜೋತು ಬಿದ್ದಿರುವ ವಿದ್ಯುತ್ ತಂತಿಯನ್ನು ಸರಿಪಡಿಸುವಂತೆ ಮನೆಯವರು ಅದೆಷ್ಟೋ ಸಲ ವರ್ಕಾಡಿ ವಿದ್ಯುತ್ ಸೆಕ್ಷನ್ ಅಧಿಕಾರಿಗಳನ್ನು ಕೇಳಿಕೊಂಡರೂ ಕಂಡು ಕಾಣದ ಜಾಣ ಕುರುಡರಂತೆ ವರ್ತಿಸಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸೆಕ್ಷನ್ ಅಧಿಕಾರಿಗಳ ನಿರ್ಲ್ಯಕ್ಷದಿಂದ ಸಾವು ಸಂಭವಿಸಿರುವುದಾಗಿ ಊರವರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ವರ್ಕಾಡಿ ವಿದ್ಯುತ್ ಸೆಕ್ಷನ್ ಅಧಿಕಾರಿಗಳ ನಿರ್ಲ್ಯಕ್ಷದಿಂದ ಸಾವು ಸಂಭವಿಸುವುದು ಇದು ಮೊದಲೇನಲ್ಲ ವರ್ಷಕ್ಕೆ ಮೊದಲು ಇದೇ ಪರಿಸರದಲ್ಲಿ ಕೆಳಗೆ ಜೋತು ಬಿದ್ದ ವಿದ್ಯುತ್ ತಂತಿಯನ್ನು ಸ್ಪರ್ಷಿಸಿ 6 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಮಾತ್ರವಲ್ಲದೆ ಎಲ್ಲ ವರ್ಷವೂ ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ಶಾಕ್ ತಗಲಿ ಸಾವನ್ನಪ್ಪುತ್ತಿರುವುದು ಮಾಮೂಲಿಯಾಗಿದೆ. ಇದಕ್ಕೆಲ್ಲಾ ಕಾರಣ ವಿದ್ಯುತ್ ಅಧಿಕಾರಿಗಳ ನಿರ್ಲ್ಯಕ್ಷವೇ ಕಾರಣವೆಂಬುದಾಗಿ ಉರವರು ಆರೊಪಿಸುತಿದ್ದಾರೆ.
ಇಂದು ಬೆಳಿಗ್ಗೆ ಊರವರು ಆಕ್ಷನ್ ಸಮಿತಿ ರೂಪೀಕರಿಸಿ ವರ್ಕಾಡಿ ವಿದ್ಯುತ್ ಸೆಕ್ಷನ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಮಾಜಿ ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಧರಣಿಯನ್ನು ಉದ್ಘಾಟಿಸಿದರು. ಮೀಂಜ ಪಂ. ವಾರ್ಡ್ ಸದಸ್ಯೆ ಅಶ್ವಿನಿ ಪಿ ಎಸ್ ಅಧ್ಯಕ್ಶತೆ ವಹಿಸಿದರು. ಜನಪ್ರತಿನಿಧಿಗಳಾದ ರಜಾಕ್, ಹಮೀದ್ ಹೊಸಂಗಡಿ, ಮುಸ್ತಫ ಕಡಂಬಾರ್, ಅನಿಲ್ ಕುಮಾರ್, ಅಶ್ರಫ್ ಬಡಾಜೆ, ಸೋಮಶೇಖರ್ ಮೊದಲಾದವರು ಪ್ರತಿಭಟನಾ ಧರಣಿಗೆ ನೇತ್ರತ್ವ ನೀಡಿದರು.