ಮಾಸಿಕ ವೇತನ ಪಾವತಿ ವಿಳಂಬ : ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಸದಸ್ಯರಿಂದ ಧರಣಿ
ಪುತ್ತೂರು: ಮಾಸಿಕ ವೇತನ ಪಾವತಿ ವಿಳಂಬ ಮತ್ತು ನಿವೃತ್ತ ನೌಕರರ ನಿವೃತ್ತಿ ಸೌಲಭ್ಯ ಬಿಡುಗಡೆ ವಿಳಂಬವನ್ನು ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಸದಸ್ಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ ಎರಡನೇ ದಿನ ತಲುಪಿತು.
ಸಂಘದ ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ್ ರೈ, ಹುತಾತ್ಮ ಸೈನಿಕರ ಸ್ಮಾರಕಕ್ಕೆ ಹೂಮಾಲೆ ಅರ್ಪಿಸಿ ಧರಣಿಯನ್ನು ಉದ್ಘಾಟಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಶ್ರೀಗಿರೀಶ್ ಮಳಿ, ಸಂಘದ ಪ್ರಧಾನ ವಕ್ತಾರ ಶಾಂತಾರಾಮ ವಿಟ್ಲ, ರಾಮಚಂದ್ರ ಅಡಪ,ಮಾಬಲ ಗಡಿಮಾರು, ಶಾಂತಪ್ಪ, ಶ್ರೀಧರ್, ಸುನಿಲ್, ಪಿ.ಆರ್. ಆನಂದಮತ್ತಿತರರು ಉಪಸ್ಥಿತರಿದ್ದರು.
ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನೌಕರರು ಕಪ್ಪುಪಟ್ಟಿ ಧರಿಸಿ ಮೌನಪ್ರತಿಭಟನೆಯನ್ನು ನಡೆಸಿದರು. ಶನಿವಾರವೂ ಪ್ರತಿಭಟನೆ ಮುಂದುವರಿಯಲಿದೆ.ಅ. 25 ಸೋಮವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ ಎಂದು ಸಂಘದ ಪ್ರಧಾನ ವಕ್ತಾರ ಶಾಂತರಾಮ ವಿಟ್ಲ ತಿಳಿಸಿದ್ದಾರೆ.