ಮಂಗಳೂರು : ದ್ವಿಚಕ್ರ ವಾಹನ ಪುರುಷ ಹಿಂಬದಿ ಸವಾರಿ ನಿಷೇಧ

ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆ ತಪ್ಪಿಸಲು ಜಿಲ್ಲೆಯಾದ್ಯಂತ ತುರ್ತಾಗಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಾಗಿ ಬಂದು ಅಪರಾಧ ಕೃತ್ಯಗಳಲ್ಲಿ ತೊಡಗಿಸುತ್ತಿದ್ದಾರೆ ಎಂಬ ಮಾಹಿತಿ ನೆಲೆಯಲ್ಲಿ ಪುರುಷ ವ್ಯಕ್ತಿಗಳು ಹಿಂಬದಿ ಸವಾರಿ ಮಾಡುವುದನ್ನು ನಿಷೇಧಿಸಲಾಗುವುದು. ಹೊಸ ನಿಯಮ ಆಗಸ್ಟ್ 5ರಿಂದಲೇ ಜಾರಿಗೆ ಬರಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನ ಕಮಿಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್, ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಾಳೆಯಿಂದಲೇ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಆದರೆ, ಈ ನಿಯಮದಿಂದ 18 ವರ್ಷದಿಂದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ವಿನಾಯ್ತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಹಿಂಬದಿ ಸವಾರರಾಗಿ ಯುವಕರು ದ್ವಿಚಕ್ರ ವಾಹನದಲ್ಲಿ ತೆರಳುವಂತಿಲ್ಲ. ಸದ್ಯಕ್ಕೆ ಒಂದು ವಾರ ಅಥವಾ ಹತ್ತು ದಿವಸ ಈ ನಿಯಮ ಜಾರಿಯಲ್ಲಿರುತ್ತದೆ. ಹಿಂದೆ ಬೇರೆ ರಾಜ್ಯದಲ್ಲಿ ಈ ರೀತಿಯ ನಿಯಮ ಜಾರಿಗೆ ತರಲಾಗಿತ್ತು. ಕೇರಳದ ವಯನಾಡಿನಲ್ಲೂ ಈ ರೀತಿ ನಿಯಮ ತರಲಾಗಿತ್ತು. ಈ ರೀತಿ ಮಾಡುವುದರಿಂದ ಹಿಂಬದಿ ಸವಾರರಾಗಿ ಬಂದು ಅಪರಾಧ ಕೃತ್ಯ ಎಸಗುವುದನ್ನು ತಡೆಗಟ್ಟಬಹುದು ಎಂದು ಎಡಿಜಿಪಿ ಹೇಳಿದ್ದಾರೆ. ಅಲ್ಲದೆ, ರಾತ್ರಿ ನಿರ್ಬಂಧ ಸಡಿಲಗೊಳಿಸುತ್ತೀರಾ ಎಂಬ ಪ್ರಶ್ನೆಗೆ, ಇಲ್ಲ. ಒಂದೇ ಬಾರಿಗೆ ನಿರ್ಬಂಧ ಸಡಿಲಿಸುವುದಿಲ್ಲ. ಅದರ ಸಮಯ ಮಿತಿಯನ್ನು ಸ್ವಲ್ಪ ಬದಲು ಮಾಡಲಾಗುವುದು. ರಾತ್ರಿ ನಿರ್ಬಂಧ ಮತ್ತು 144 ಸೆಕ್ಷನ್ ಮುಂದುವರಿಸಲಾಗುವುದು ಎಂದು ಹೇಳಿದರು.