ಬೆಳ್ಳಾರೆ ಪ್ರವೀಣ್ ಹತ್ಯೆ ಪ್ರಕರಣ ಯಾರು ಮಾಡಿದ್ದಾರೆ ಗೊತ್ತಾಗಿದೆ : ಎಡಿಜಿಪಿ ಅಲೋಕ್ ಕುಮಾರ್

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಹತ್ಯೆ ನಡೆಸಿದವರು ಯಾರೆಂದು ಗೊತ್ತಾಗಿದೆ. ಅವರನ್ನು ಹಿಡಿದೇ ಹಿಡಿಯುತ್ತೇವೆ. ಜೊತೆಗೆ ಅದರ ಹಿಂದಿರುವ ತಂಡದ ಬಗ್ಗೆಯೂ ಮಾಹಿತಿ ಇದೆ, ನಾವು ಟ್ರೇಸ್ ಮಾಡ್ತೀವಿ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಾವು ಮೂವರನ್ನು ವಿಚಾರಣೆ ನಡೆಸುತ್ತಿದ್ದೇವೆ. ಪ್ರಮುಖ ಮಾಹಿತಿಗಳು ಸಿಕ್ಕಿವೆ. ಅಮಾಯಕರನ್ನು ನಾವು ಬಂಧನ ಮಾಡಲ್ಲ. ಯಾರು ಶಾಮೀಲಾತಿ ಹೊಂದಿದ್ದಾರೋ ಅವರನ್ನು ಬಂಧಿಸುತ್ತೇವೆ. ಸಂಚುಕೋರರು ಯಾರು ಅನ್ನೋದು ಗೊತ್ತಾಗಿದೆ. ಯಾರು ಹೊಡೆದಿದ್ದಾನೆ ಅದು ಕೂಡ ಗೊತ್ತಾಗಿದೆ. ಅವರನ್ನು ಅರೆಸ್ಟ್ ಮಾಡುತ್ತೇವೆ. ಎನ್‍ಐಎ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುತ್ತೇನೆ. ಯಾವಾಗ ಹಸ್ತಾಂತರ ಮಾಡಬೇಕು ಅನ್ನೋದ್ರ ಬಗ್ಗೆ ಚರ್ಚೆ ನಡೆಸುತ್ತೇನೆ. ಆರೋಪಿಗಳು ಯಾರಿದ್ದಾರೆ, ಅದನ್ನು ಪತ್ತೆ ಮಾಡುವ ಕಾರ್ಯವನ್ನು ಕರ್ನಾಟಕ ಪೊಲೀಸ್ ಬಿಡೋದಿಲ್ಲ. ನಾವು ಎನ್‍ಐಎಗೆ ಕೇಸನ್ನು ಕೊಟ್ಟರೂ, ಪ್ರಮುಖ ಆರೋಪಿಯನ್ನು ನಾವೇ ಹಿಡೀತೇವೆ ಎಂದು ಹೇಳಿದ್ದಾರೆ. ಸುರತ್ಕಲ್ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಕಸ್ಟಡಿಗೆ ಪಡೆಯಲಾಗಿದೆ. ಯಾರು ಅದರ ಹಿಂದಿದ್ದಾರೆ, ಅವರಿಗೆ ಯಾರು ಬೆಂಬಲ ಇದ್ದಾರೆ ಅದನ್ನು ಪತ್ತೆ ಮಾಡುತ್ತೇವೆ. ತನಿಖಾಧಿಕಾರಿ ಮಹೇಶ್ ಕುಮಾರ್ ಅದನ್ನು ಮಾಡಲಿದ್ದಾರೆ ಎಂದು ಎಡಿಜಿಪಿ ಹೇಳಿದರು.
ಕೇರಳ ಗಡಿಭಾಗದಲ್ಲಿ ಒಟ್ಟು 18 ಚೆಕ್ ಪೆÇೀಸ್ಟ್ ಹಾಕಲಾಗಿದೆ. ಅಲ್ಲಿ ಕೆಎಸ್ ಆರ್ ಪಿ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ. ಅದರ ಜೊತೆಗೆ ಅಲ್ಲಿ ಸಿಸಿಟಿವಿ ಹಾಕಲಾಗುವುದು. ಅಪರಾಧಿಗಳನ್ನು ಪತ್ತೆ ಮಾಡಿದರೂ, ಈ ರೀತಿಯ ವ್ಯವಸ್ಥೆ ಕನಿಷ್ಠ ಒಂದು ವರ್ಷ ಇರಲಿದೆ ಎಂದು ಎಡಿಜಿಪಿ ಹೇಳಿದ್ದಾರೆ.