ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ
ಬಂಟ್ವಾಳ: 2025ಕ್ಕೆ ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದ್ದು ಸೇವಾ ಸಂಸ್ಥೆಗಳು ಕ್ಷಯರೋಗಿಗಳನ್ನು ದತ್ತು ಪಡೆದು ಆರೈಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯನ್ವಯ ಕ್ಷಯರೋಗಿಗಳಿಗೆ ವರದಾನವಾಗಿರುವ ನಿಕ್ಷಯ ಮಿತ್ರ ಯೋಜನೆಯಂಗವಾಗಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನವು ಮಂಗಳೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಕೆಲವು ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದು ಸೋಮವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷಯ ರೋಗಿಗಳಿಗೆ ಧವಸ ಧಾನ್ಯ ಸೇರಿದಂತೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವಾಂಜಲಿ ಸಂಸ್ಥೆಯು ತನ್ನ ಸೇವಾ ಕಾರ್ಯದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಇದೀಗ ನಿಕ್ಷಯ ಮಿತ್ರ ಯೋಜನೆಯ ಮೂಲಕ ಕ್ಷಯ ರೋಗಿಗಳನ್ನು ದತ್ತು ಪಡೆದು ಆಹಾರ ಸಾಮಾಗ್ರಿಗಳನ್ನು ಒದಗಿಸುವ ಮಹತ್ಕಾರ್ಯವನ್ನು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಹಲವಾರು ದೂರದೃಷ್ಟಿ ಕಾರ್ಯಕ್ರಮದಂತೆ ನಿಕ್ಷಯ ಮಿತ್ರ ಕಾರ್ಯಕ್ರಮವೂ ಒಂದಾಗಿದ್ದು ಪ್ರಧಾನಿಯವರ ಆಶಯಕ್ಕೆ ಸೇವಾಂಜಲಿ ಸಂಸ್ಥೆ ಕೈ ಜೋಡಿಸಿದೆ ಎಂದರು.
ಎಂ. ಆರ್ ನಾಯರ್ ಮಾತನಾಡಿ ಕೇಂದ್ರ ಸರ್ಕಾರದ ನಿಕ್ಷಯ ಮಿತ್ರ ಯೋಜನೆಯಂತೆ ಕ್ಷಯರೋಗಿಗಳನ್ನು ದತ್ತು ಪಡೆದು ಸೇವಾಂಜಲಿ ಸಂಸ್ಥೆ ಆಹಾರ ಕಿಟ್‍ಗಳನ್ನು ರೋಗಿಗಳಿಗೆ ವಿತರಿಸಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯ ವೃದ್ದಿಸಿಕೊಳ್ಳಬೇಕೆಂದು ಅವರು ತಿಳಿಸಿದರು.ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆನ್ಸಿಲಾ ಪತ್ರಾವೋ ಈ ಯೋಜನೆಯ ಬಗ್ಗೆ ಪೂರಕ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪ್ರಮುಖರಾದ ಮಹೇಶ್ ತುಪ್ಪೆಕಲ್ಲು, ನಾರಾಯಣ ಬಡ್ಡೂರು, ಕಂಪ ಸದಾನಂದ ಆಳ್ವ, ಆರೋಗ್ಯ ಸಹಾಯಕಿ ರೋಹಿಣಿ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿ ಕಾರ್ಐಕ್ರಮ ನಿರೂಪಿಸಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ವಂದಿಸಿದರು. ಪ್ರಶಾಂತ್ ತುಂಬೆ, ಸುಕೇಶ್ ಶೆಟ್ಟಿ ತೇವು, ಭಾಸ್ಕರ ಚೌಟ, ಉಮೇಶ್ ಶೆಟ್ಟಿ ಬರ್ಕೆ, ವಿಕ್ರಂ ಬರ್ಕೆ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.