ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ದೇವರಾಜ ಅರಸು ರಾಜ್ಯ ಪುರಸ್ಕಾರ
ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಗಟ್ಟಿ ಧ್ವನಿ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸು ಅವರ ನೆನಪಲ್ಲಿ ಕರ್ನಾಟಕ ರಾಜ್ಯ ಸರಕಾರ ಕೊಡುವ ಪ್ರತಿಷ್ಠಿತ ದೇವರಾಜ ಅರಸು ರಾಜ್ಯ ಪುರಸ್ಕಾರ ಈ ಬಾರಿ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಲಭಿಸಿದೆ. ಬಡ ಕೃಷಿ ಕುಟುಂಬದಿಂದ ಬಂದಿರುವ ಡಾ ಕುಲಾಲ್,ಅರಸು ರವರ ಬಿಸಿಎಂ ಹಾಸ್ಟೆಲ್ ನಲ್ಲಿ 16 ವರ್ಷಗಳ ಕಾಲ ಓದಿ ವೈದ್ಯನಾಗಿ ಉನ್ನತ ಶಿಕ್ಷಣ ಪಡೆದವರು.
ಅರಸು ಚಿಂತನೆಗಳನ್ನ ಆದರ್ಶವಾಗಿಟ್ಟು ಕೊಂಡು, ಸಮಾಜದ ಎಲ್ಲಾ ವರ್ಗಗಳ ನಾಯಕನಾಗಿಯೂ ಸಹಾ, ತನ್ನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮೂಲಕ ಕಳೆದ 25 ವರ್ಷಗಳಿಂದ ಬಡವರ ನಿರ್ಗತಿಕರ ನೊಂದವರ ಹಿಂದುಳಿದವರ ಪರ ಜಾಸ್ತಿ ಒತ್ತು ಕೊಟ್ಟು ಅರೋಗ್ಯ, ಶಿಕ್ಷಣ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಸಂಘಟನಾ ಸೇವೆ ಮಾಡಿ,ಅರೋಗ್ಯ ಪೂರ್ಣ ಆಹಾರಕ್ಕೆ ಒತ್ತು ಕೊಡುವ ಮೂಲ ವೃತ್ತಿಯಾದ ಕುಂಬಾರಿಕೆ ಉಳಿಸಲು ಕಾರ್ಡ್ ಚಳುವಳಿ ಮೂಲಕ ಸರಕಾರಗಳ ಗಮನ ಸೆಳೆದು, ಸರ್ವಜ್ಞ ಜಯಂತಿ, ಕುಂಭ ಕಲಾ ಅಭಿವೃದ್ಧಿ ಮಂಡಳಿ ತರುವಲ್ಲಿ ಹೆಣಗಿ ಕುಂಬಾರರಿಗೆ ಸಾಮಾಜಿಕ ನ್ಯಾಯ ಕೊಡಿಸುವತ್ತಾ ಸ್ವಾರ್ಥ ಇಲ್ಲದೇ ದಿಟ್ಟ ಹೆಜ್ಜೆ ಇಟ್ಟವರು.
ಕಳೆದ 25 ವರ್ಷಗಳಿಂದ ಕೂಲಿ ಕಾರ್ಮಿಕರ ಬಡವರ ಅನುಕೂಲತೆಗಾಗಿ ಬೆಳಿಗ್ಗೆ 7 ಗಂಟೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಕೊಟ್ಟವರು.ಜನಾನುರಾಗಿ ಸಮಾಜ ಮುಖಿ ವೈದ್ಯ, ವೈದ್ಯಕೀಯ ಶಿಕ್ಷಕ, ಸಾಹಿತಿ ಮತ್ತು ಮಿಂಚಿನ ಸಂಘಟಕ.ಹಿಂದುಳಿದ ವರ್ಗದಿಂದ ಬಂದಿರುವ ಗಟ್ಟಿ ಧ್ವನಿಯ ಚಿಂತಕ, ನೇರ ನಡೆ ನುಡಿಯ ಸವ್ಯಸಾಚಿ ಸಮಾಜ ವಿಜ್ಞಾನಿ ಎಂದು ನಾಡಿನ ಉದ್ದಗಲಕ್ಕೂ ಸದ್ದಿಲ್ಲದೇ ಸುದ್ಫಿಯಾಗಿ, ಡಾ ಬಿ ಸಿ ರಾಯ್ ರಾಜ್ಯ ವೈದ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ನೂರಾರು ಪ್ರತಿಷ್ಠಿತ ಗೌರವ ಪಡೆದಿರುವ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರಿಗೆ ಅರ್ಹತೆಗೆ ತಕ್ಕಂತೆ ಈ ಪ್ರಶಸ್ತಿ ಲಭಿಸಿದೆ