ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್:ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ
ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ ಕಳೆದ ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಪರಿಣಾಮ ಉಳ್ಳಾಲ, ತೊಕ್ಕೋಟ್ಟು, ಬಜಾಲ್, ಜಪ್ಪಿನಮೊಗರು ಸೇರಿದಂತೆ ಆಸುಪಾಸಿನ ಸಾವಿರಾರು ಜನತೆ ತೀರಾ ಸಂಕಷ್ಟಕ್ಕೊಳಗಾಗಿ ದಿನನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ರೈಲ್ವೆ ಇಲಾಖೆ ಕೆಳಸೇತುವೆ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮುಗಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ಕೇಂದ್ರ ವಿಭಾಗ ಸಮಿತಿಯು ಒತ್ತಾಯಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ನಿಯೋಗವೊಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.
ಕೇರಳ ರಾಜ್ಯದಿಂದ ಹಿಡಿದು ಉಳ್ಳಾಲ, ತಲಪಾಡಿ, ತೊಕ್ಕೋಟು, ಕೋಣಾಜೆ, ಬಜಾಲ್, ಜಪ್ಪಿನಮೊಗರು ಸೇರಿದಂತೆ ಆ ಭಾಗದ ಸಾವಿರಾರು ಜನತೆಗೆ ತಮ್ಮ ಉದ್ಯೋಗ, ಶಿಕ್ಷಣ, ಆರೋಗ್ಯಕ್ಕೆಸಂಬಂದಿಸಿದ ದೈನಂದಿನ ಕೆಲಸ ಕಾರ್ಯಗಳಿಗೆ ಮಂಗಳೂರು ನಗರಕ್ಕೆ ಪ್ರವೇಶಿಸಲು ಜೆಪ್ಪುಪಟ್ಣದಿಂದ ಮಹಾಕಾಳಿಪಡ್ಪು ಮಾರ್ಗವಾಗಿ ಮಂಗಳಾದೇವಿ ದೇವಸ್ಥಾನದ ರಸ್ತೆಯ ಮೂಲಕ ನಗರಕ್ಕೆ ಸಂಪರ್ಕಿಸುವ ಈ ಮುಖ್ಯರಸ್ತೆಯನ್ನೇ ಅವಲಂಬಿಸಬೇಕಾಗುತ್ತದೆ. ಮಾತ್ರವಲ್ಲದೆ ಇದೇ ರಸ್ತೆಯಲ್ಲಿ ಸುಮಾರು 7 ಸಿಟಿ ಬಸ್‌ಗಳು ಸಂಚರಿಸುತ್ತಿದ್ದು ಮತ್ತು ಸರಕುಗಳನ್ನು ಸಾಗಿಸುವ ಭಾರೀ ಗಾತ್ರದ ಘನವಾಹನಗಳು ಕೂಡ ಇದೇ ರಸ್ತೆಯನ್ನು ಅವಲಂಬಿಸಿದೆ.ಆದರೆ ಕಳೆದ ಮೂರು ವರ್ಷಗಳಿಂದ ಆಮೆ ವೇಗದಲ್ಲಿ ಸಾಗುತ್ತಿರುವ ಈ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ.ಇಂತಹ ಪ್ರಮುಖ ರಸ್ತೆಯು ಮುಚ್ಚಲ್ಪಟ್ಟಾಗ ಅದಕ್ಕೆ ಪರ್ಯಾಯ ರಸ್ತೆಯ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಮಂಗಳೂರು ನಗರ ಪಾಲಿಕೆಯ ಪ್ರಧಾನ ಜವಾಬ್ದಾರಿಯಾಗಿದ್ದು ಈ ಬಗ್ಗೆ ಇಲ್ಲಿಯ ತನಕ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿರುವುದಿಲ್ಲ. ಆದರೂ ಅಲ್ಲೇ ಪಕ್ಕದಲ್ಲಿರುವ ಅತ್ಯಂತ ಕಿರಿದಾದ ಮತ್ತು ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆಯನ್ನು ದ್ವಿಚಕ್ರ ವಾಹನ ಸವಾರರು ಬಳಸುತ್ತಿದ್ದರೂ ಅದನ್ನು ಈವರೆಗೂ ಕನಿಷ್ಟ ರಿಪೇರಿಗೊಳಿಸಲು ಪಾಲಿಕೆ ಆಡಳಿತ ಮುಂದಾಗಿಲ್ಲ. ಆ ರಸ್ತೆಯಲ್ಲಿ ಸಣ್ಣ ತೋಡು ಇದ್ದು ಅದರ ಮೇಲಿರುವ ತುಂಡಾಗಿರುವ ಚಪ್ಪಡಿ ಕಲ್ಲಿನ ಮೇಲೆ ಕೇವಲ ದ್ವಿಚಕ್ರ ವಾಹನಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಅಪಾಯಕಾರಿ ಸನ್ನಿವೇಶದಲ್ಲಿ ಸಂಚರಿಸಬೇಕಾದ ಅನಿರ್ವಾಯತೆ ಸೃಷ್ಟಿಯಾಗಿದೆ. ಈ ಕಿರಿದಾದ ರಸ್ತೆಯ ಇಂಟರ್ ಲಾಕ್ ಕೂಡ ಎದ್ದು ಸಂಪೂರ್ಣ ಸಂಚಾರಕ್ಕೆ ತೊಡಕ್ಕಾಗಿದ್ದರೂ ಮ.ನ.ಪಾ ಆಡಳಿತ ಮಾತ್ರ ಜನವಿರೋಧಿಯಾಗಿ ವರ್ತಿಸಿದೆ. ಒಟ್ಟಿನಲ್ಲಿ ಈ ರಸ್ತೆಯಲ್ಲಿ ರಿಕ್ಷಾ, ಕಾರು, ಬಸ್, ಲಾರಿ ಇನ್ನಿತರ ವಾಹನಗಳ ಸಂಚಾರವಿಲ್ಲದೆ ಸಾವಿರಾರು ಜನತೆ ಪ್ರತಿನಿತ್ಯ ಪರಿತಪಿಸುವಂತಾಗಿದೆ. ಇತ್ತೀಚೆಗೆ ರೈಲ್ವೆ ಕೆಳ ಸೇತುವೆ ನಿರ್ಮಾಣಗೊಳ್ಳುವ ವೇಳೆ ಕುಸಿತಗೊಂಡಿರುವ ಘಟನೆ ನಡೆದ ನಂತರ ಈ ನಿರ್ಮಾಣ ಕಾಮಗಾರಿಯು ಅವೈಜ್ಞಾನಿಕ ಮತ್ತು ಕಳಪೆಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ. ಮತ್ತು ಕಾಮಗಾರಿ ಪೂರ್ಣಗೊಳಿಸಲು ನೀಡಿದ ಅವಧಿಯೂ ಮುಕ್ತಾಯಗೊಂಡಿದ್ದು ಈವರೆಗೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಂಬAಧಪಟ್ಟ ಇಲಾಖೆಯು ಸಮಗ್ರ ತನಿಖೆ ನಡೆಸಬೇಕೆಂದು ಸಿಪಿಐಎಂ ಒತ್ತಾಯಿಸಿದೆ.
ನಿಯೋಗದ ಸಿಪಿಐಎಂ ಕೇಂದ್ರ ವಿಭಾಗ ಸಮಿತಿಯ ಸಂಚಲಕರಾದ ಪ್ರಮೀಳಾ ಎಂ.ದೇವಾಡಿಗ, ಸಿಪಿಐಎಮ್‌ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ನಗರ ಸಮಿತಿ ಮುಖಂಡರಾದ ನಾಗೇಶ್ ಕೋಟ್ಯಾನ್, ಭಾರತಿ ಬೋಳಾರ, ಅಸುಂತ ಡಿಸೋಜರವರು ಉಪಸ್ಥಿತರಿದ್ದರು.