ಜಿಲ್ಲಾ ಕಂಬಳ ಸಮಿತಿಯನ್ನು ಹೈಜಾಕ್ ಆರೋಪ : ಕಂಬಳ ಸಮಿತಿಯ ಅಧ್ಯಕ್ಷ ರೋಹಿತ್ ಹೆಗ್ಡೆ ರಾಜೀನಾಮೆಗೆ ಪಟ್ಟು

ಮೂಡುಬಿದಿರೆ : ಜಿಲ್ಲಾ ಕಂಬಳ ಸಮಿತಿಯನ್ನು ಹೈಜಾಕ್ ಮಾಡಿ ಗುಣಪಾಲ ಕಡಂಬರ ಕಂಬಳ ಅಕಾಡೆಮಿಯನ್ನು ಫೋಕಸ್ ಮಾಡಲಾಗುತ್ತಿದೆ. ಸುಕುಮಾರ್ ಶೆಟ್ಟಿ, ಚಂದ್ರ ಆಳ್ವ, ಪಾಟಿಲ ಭಾಸ್ಕರ್ ಕೋಟ್ಯಾನ್, ಶಾಂತರಾಮ ಶೆಟ್ಟಿ, ನವೀನ್, ಸತೀಶ್ಚಂದ್ರ ಸಾಲ್ಯಾನ್ ಅವರಂತಹ ಹಿರಿಯ ಯಜಮಾನರು ಅಕಾಡೆಮಿ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರಗಳನ್ನು ಸಹಿಸಿಕೊಂಡಿರುವುದು ಅಚ್ಚರಿ ಮೂಡಿಸುತ್ತಿದೆ. ಜಿಲ್ಲಾ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸ್ವಾಭಿಮಾನವನ್ನು ಉಳಿಸಿಕೊಳ್ಳಲಿ ಎಂದು ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕಂಬಳ ಸಮಿತಿಗೆ 5 ವರ್ಷದ ಇತಿಹಾಸ ಇದೆ. ಆದರ ರಾಜ್ಯ ಕಂಬಳ ಸಮಿತಿ ರಚನೆ ಬಗ್ಗೆ ಸರಕಾರ ಹೊರಡಿಸಿದ ಸುತ್ತೋಲೆಯನ್ನು ಜಿಲ್ಲಾ ಕಂಬಳ ಸಮಿತಿ ಸಭೆಯ ಗಮನಕ್ಕೆ ತರದೆ ಗುಣಪಾಲ ಕಡಂಬ ಅವರು ರಾಜ್ಯ ಸಮಿತಿಗೆ ತಮ್ಮನ್ನು ಅಧ್ಯಕ್ಷರೆಂದು ಘೋಷಿಸಿಕೊಂಡು ಜತೆಗೆ ತಮಗೆ ಬೇಕಾದವರ ಹೆಸರನ್ನು ಮಾತ್ರ ಸಮಿತಿಗೆ ಕಳುಹಿಸಿದ್ದಾರೆ, ಜಿಲ್ಲಾ ಕಂಬಳ ಸಮಿತಿಗೆ ಬರಬೇಕಾಗಿದ್ದ ಸರಕಾರದ ಸುತ್ತೋಲೆ, ಕಂಬಳ ಅಕಾಡಮಿಯ ಅಧ್ಯಕ್ಷರ ಹೆಸರಿಗೆ ಯಾಕೆ ಬಂತು ಎಂದು ಪ್ರಶ್ನಿಸಿದ ಅವರು ಜಿಲ್ಲಾ ಕಂಬಳ ಸಮಿತಿಗಿಂತ ಕಂಬಳ ಅಕಾಡೆಮಿಯ – ಸುಪ್ರೀಂ ಎಂದು ಬಿಂಬಿಸಲು ಕಡಂಬರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಂಬಳ ಸಮಿತಿ ರಚಗೆ ನ್ಯಾಯಬದ್ಧವಾಗಿಲ್ಲ ಎಂದು 2008ರಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿ ನಿಯಮಾನುಸಾರ ಸಮಿತಿ ರಚಿಸಲು ಸೂಚಿಸಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. 2009ರಲ್ಲಿ ಜಿಲ್ಲಾ ಕಂಬಳ ಸಮಿತಿಯ ಜವಾಬ್ದಾರಿಯಿಂದ ದೂರ ಉಳಿಯುವುದಾಗಿ ಕಡಂಬರು ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಅದಾಗ್ಯೂ ಅವರು ಕಂಬಳ ಸಮಿತಿಯಲ್ಲಿ ಮುಂದುವರಿದಿದ್ದಾರೆ. 2015ರಲ್ಲಿ ಕಂಬಳ ಉಳಿಸಲು ನಡೆದ ಹೋರಾಟ ವೇಳೆ ಹೊಸ ಸದಸ್ಯತ್ವ ಅಭಿಯಾನ ನಡೆದಾಗ ಕಡಂಬರು ಸದಸ್ಯತ್ವ ಪಡೆಯದೆ ದೂರ ಉಳಿದಿದ್ದಾರೆ. ಅಂತವರಿಗೆ ಸಮಿತಿ, ಏನೂ ಕ್ರಮ ಕೈಗೊಂಡಿಲ್ಲ. ಅಧಿಕೃತ ಮಾನ್ಯತೆ ಪಡೆಯದ ತಂತ್ರಜ್ಞಾನವನ್ನು ಬಳಸಿಕೊಂಡು, ಕಂಬಳದ ದಾಖಲೆಯನ್ನು ನಿರ್ಧರಿಸುವುದು ಸರಿ ಇಲ್ಲ. ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದಿಂದ ಸಂದ ಗೌರವ ಧನವನ್ನು ಪಡಕೊಳ್ಳಲಾಗಿದೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅನುದಾನವನ್ನು ಪಡೆದುಕೊಳ್ಳಲಾಗಿದೆ. ಅಕಾಡೆಮಿ ಹೆಸರಲ್ಲಿ ಸರಕಾರದಿಂದ ಮತ್ತು ಸಾರ್ವಜನಿಕರಿಂದ ದೇಣಿಗೆ ಪಡೆದು ಲೆಕ್ಕಪತ್ರ ಮಂಡಿಸಿಲ್ಲವೆಂದು ಆರೋಪಿಸಿದರು.