ಯುಪಿಸಿಎಲ್ ದೇಶೀಯ ಕಲ್ಲಿದ್ದಲು ಬಳಸುವ ಹುನ್ನಾರ : ಎಲ್ಲೂರು ಗ್ರಾಮ ಸಭೆಯಲ್ಲಿ ವಿರೋಧ

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಜನವಿರೋಧಿ ಯುಪಿಸಿಎಲ್ ಕಂಪನಿ ವಿದೇಶಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ನಡೆಸುವ ಒಡಂಬಡಿಕೆ ಇದ್ದರೂ ಇದೀಗ ಅದು ಜನರಿಗೆ ಸಮಸ್ಯೆಯೊಡ್ಡುವ ದೇಶೀ ಕಲ್ಲಿದ್ದಲು ಬಳಸುವ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಎಲ್ಲೂರು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ.
ಈ ಬಗ್ಗೆ ಗ್ರಾಮಸಭೆಯಲ್ಲಿ ವಿಚಾರ ಮಂಡನೆ ಮಾಡಿದ ಗ್ರಾಮಸ್ಥ ನಾಗೇಶ್ ರಾವ್, ರಾಜ್ಯದಲ್ಲಿ ವಿದ್ಯುತ್ ಬರ ಎನ್ನುವ ಕಾರಣ ಒಡ್ಡಿ ನಮ್ಮ ಈ ಸುಂದರ ಪರಿಸರದಲ್ಲಿ ಈ ಉಷ್ಣ ವಿದ್ಯುತ್ ಸ್ಥಾವರವನ್ನು ಜನವಿರೋಧಿ ಕಂಪನಿಯನ್ನು ನಿರ್ಮಾಣ ಮಾಡಿದ್ದು, ಇದೀಗ ಈ ಕಂಪನಿ ಆಗೋಮ್ಮೆ ಈಗೋಮ್ಮೆ ವಿದ್ಯುತ್ ಉತ್ಪಾದನೆ ಮಾಡುವುದು ಬಿಟ್ಟರೆ ಬಹುತೇಕ ಸಮಯ ಸ್ಥಗಿತಗೊಂಡಿರುತ್ತದೆ. ಈ ಬಗ್ಗೆ ಪರಿಶೀಲಿಸಿದಾಗ ನಮಗೆ ಸಿಕ್ಕ ಸ್ಫೋಟಕ ವಿಚಾರ ತಮ್ಮ ಸ್ವಂತ ಲಾಭ ಹೆಚ್ಚುಸುವುದಕ್ಕಾಗಿ ಸುಮಾರು ಮೂವತ್ತು ಶೇಕಡ ಕಲ್ಲಿದ್ದಲು ದೇಶಿಯದ್ದೇ ಬಳಸುವ ಬಗ್ಗೆ ಹುನ್ನಾರ ನಡೆಸುತ್ತಿದೆ ಎಂಬುದು. ದೇಶಿಯ ಕಲ್ಲಿದ್ದಲು ಬಳಸಿದರೆ ಸುಮಾರು ಎರಡುವರೆ ಸಾವಿರ ಲಕ್ಷ ರೂಪಾಯಿ ಲಾಭ ಹೆಚ್ಚುವರಿಗೆ ಅದಾನಿ ನೇತ್ರತ್ವದ ಯುಪಿಸಿಎಲ್ ಪಡೆಯಲಿದೆಯಾದರೂ, ಈ ಭಾಗದ ಜನ ಸುಮಾರು ಐವತ್ತು ಪಟ್ಟು ಅಧಿಕ ಹಾರು ಬೂದಿ ಸೃಷ್ಠಿಯಾಗಿ ಜನ ಚರ್ಮರೋಗಾಧಿ ಶ್ವಾಸಕೋಶ, ಸಹಿತ ಕ್ಯಾನ್ಸರ್ ರೋಗದಿಂದ ಬಳಲುವ ಬಗ್ಗೆ ಇಷ್ಟರಲ್ಲೇ ಆರೋಗ್ಯ ಇಲಾಖೆ ವರದಿ ನೀಡಿರುವುದು ಗಮನಾರ್ಹ ಎಂದರು.
ಅದಲ್ಲದೆ ನಮ್ಮ ರಾಜ್ಯದ ವಿದ್ಯುತ್ ಸಮಸ್ಯೆಗಾಗಿ ನಿರ್ಮಾಣವಾದ ಕಂಪನಿಯಲ್ಲಿ ಉತ್ಪಾದನೆಯಾದ ವಿದ್ಯುತನ್ನು ಕೇರಳ ರಾಜ್ಯಕ್ಕೆ ಮಾರಾಟ ಮಾಡುವ ಇವರ ಹುನ್ನಾರ ಖಂಡನೀಯ ಇದಕ್ಕೂ ನಮ್ಮ ವಿರೋಧವಿದೆ. ಹಾಗೂ ಇದೀಗ ಕಂಪನಿಯು ಯಾವುದೇ ನಿಯಮ ಪಾಲಿಸುತ್ತಿಲ್ಲ ಪರಿಸರ ಇಲಾಖೆ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೇ ಸಂದರ್ಭ ದಾರಿದೀಪ, ನಳ್ಳಿನೀರು ಸಮರ್ಪಕವಾಗಿ ಸರಬರಾಜು ಮಾಡುವಂತೆ ಗ್ರಾ.ಪಂ.ನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ವೇಳೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರ ಮಧ್ಯೆ ಗ್ರಾಮಸ್ಥ ಮಧ್ಯದಲ್ಲೇ ಮಾತಿನ ಚಕಮಕಿ ನಡೆಯುವ ಮೂಲಕ ಗ್ರಾ.ಪಂ.ನಲ್ಲಿ ಎಲ್ಲವೂ ಸರಿಇಲ್ಲ ಎಂಬುದು ಸಾಭೀತಾಗಿದೆ.
