ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತ : ಪುತ್ತೂರಿನ ಉರ್ಲಾಂಡಿಯಲ್ಲಿ ನಡೆದ ಘಟನೆ

ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ಇಲ್ಲಿನ ಬೈಪಾಸ್ ರಸ್ತೆಯ ಉರ್ಲಾಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಶುಂಠಿಕೊಪ್ಪದ ಚಂಗಪ್ಪ ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಶ್ರೀ ಶರವು ಗಣೇಶ್ ಆಂಬ್ಯುಲೆನ್ಸ್ ನಲ್ಲಿ ಶುಂಠಿಕೊಪ್ಪಕ್ಕೆ ಕೊಂಡೊಯ್ಯುವಾಗ ಘಟನೆ ಸಂಭವಿಸಿದೆ. ಘಟನೆಯಲ್ಲಿ ಆಂಬ್ಯುಲೆನ್ಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮೃತರ ಪತ್ನಿ ಲಲಿತಾ ಹಾಗೂ ಇನ್ನೋರ್ವ ಮಹಿಳೆ ಇನ್ನೊಂದು ವಾಹನದಲ್ಲಿ ಹಿಂಬಾಲಿಸುತ್ತಿದ್ದರು.

ಮಂಗಳೂರಿನಿಂದ ಆಂಬುಲೆನ್ಸ್ ಉರ್ಲಾಂಡಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಬದಿಯ ಕಬ್ಬಿಣದ ತಡೆಗೋಡೆಗೆ ಢಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ರಸ್ತೆ ಬದಿ ಪಲ್ಟಿಯಾಗಿದೆ. ಬಳಿಕ ಆದರ್ಶ ಆಸ್ಪತ್ರೆಯ ಆಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ಶುಂಠಿಕೊಪ್ಪಕ್ಕೆ ಕೊಂಡೊಯ್ಯಲಾಯಿತು. ಪುತ್ತೂರು ನಗರ ಪೋಲಿಸ್ ಠಾಣೆಯ ಪಿಎಸ್ ಐ ರಾಜೇಶ್ ಕೆ.ವಿ., ಸಿಬ್ಬಂದಿಗಳಾದ ಸ್ಕರಿಯ, ಸತೀಶ್, ನವೀನ್, ಉದಯ, ಸಂತೋಷ್, ಬಸವರಾಜ್ ಅವರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.