ಸುಬ್ರಮಣ್ಯ: ಭಾರಿ ಮಳೆಗೆ ಗುಡ್ಡ ಕುಸಿದು ಇಬ್ಬರು ಮಕ್ಕಳ ದುರ್ಮರಣ

ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿ ಭಾರಿಮಳೆಗೆ ಮನೆ ಮೇಲೆ ಗುಡ್ಡಕುಸಿದು ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ದಾರುಣ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ.ಕಡಬ ತಾಲೂಕಿನ ಸುಬ್ರಹ್ಮಣ್ಯ ಕುಮಾರದಾರ ಪರ್ವತಮುಖಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ಭಾರಿ ಮಳೆಗೆ ಮನೆ ಮೇಲೆ ಗುಡ್ಡಕುಸಿದು ಮನೆ ಸಂಪೂರ್ಣ ಮಣ್ಣಿನಡಿ ಬಿದ್ದಿದ್ದು ಇದರಲ್ಲಿ ಕುಸುಮಧಾರ ಮತ್ತು ರೂಪಾಶ್ರೀ ದಂಪತಿಗಳ ಇಬ್ಬರು ಹೆಣ್ಣು ಮಕ್ಕಳಾದ ಐದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಶೃತಿ(11) ಮತ್ತು ಒಂದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಜ್ಞಾನ ಶ್ರೀ(6) ಮಣ್ಣಿನಡಿ ಸಿಲುಕಿದ್ದರು ತಕ್ಷಣ ಸ್ಥಳೀಯರು ಜೆಸಿಬಿ, ಹಿಟಾಚಿ ತರಿಸಿ ರಕ್ಷಣಾ ಕಾರ್ಯಾಚರಣೆ ಸುರುಮಾಡಿದ್ದರು ಈ ವೇಳೆಗೆ ಸ್ಥಳಕ್ಕೆ ಪುತ್ತೂರು ಎಸಿ ಗಿರೀಶ್ ನಂದನ್ , ಸುಬ್ರಹ್ಮಣ್ಯ ಪೊಲೀಸರು , ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆಗೆ ಇಳಿದು ರಾತ್ರಿ ಸುಮಾರು 10:45 ರ ವೇಳೆಗೆ ಇಬ್ಬರು ಮಕ್ಕಳನ್ನು ಮೇಲಕ್ಕೆತ್ತಿ ಆಂಬುಲೆನ್ಸ್ ಮೂಲಕ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು ವೈದ್ಯರು ಪರೀಕ್ಷಿಸಿದಾಗ ಅಷ್ಟರ ವೇಳೆಗೆ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಮನೆ ಸಂಪೂರ್ಣ ಬಿದ್ದಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲ ಮಣ್ಣಿನಡಿ ಸಿಲುಕಿಕೊಂಡಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.