ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ : ಕಾಂಗ್ರೆಸ್ ಮುಖಂಡ ಮನಮೋಹನ್ ಗೋಳ್ಯಾಡಿ ಪಕ್ಷದಿಂದ ಉಚ್ಛಾಟನೆ
ಕಡಬ,: ಕಾಂಗ್ರೆಸ್ ಪಕ್ಷದ ಬಿಳಿನೆಲೆ ವಲಯದ ಮಾಜಿ ಅಧ್ಯಕ್ಷ, ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ್ ಗೋಳ್ಯಾಡಿ ಅವರನ್ನು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪಕ್ಷ ವಿರೋದಿ ಚಟುವಟಿಕೆಯ ನಡೆಸಿದ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‍ಕುಮಾರ್ ಶೆಟ್ಟಿ ಬಿಳಿನೆಲೆ ಅವರು ತಿಳಿಸಿದ್ದಾರೆ.
ಅವರು ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮನಮೋಹನ್ ಗೋಳ್ಯಾಡಿ ಅವರು ಬಿಜೆಪಿಯವರೊಂದಿಗೆ ಸೇರಿಕೊಂಡು ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಗಮನಕ್ಕೆ ಬಂದ ಕೂಡಲೇ ಅವರಿಗೆ ಪಕ್ಷದ ವತಿಯಿಂದ ತಿಳುವಳಿಕೆ ಪತ್ರ ನೀಡಲಾಗಿತ್ತು. ಶ್ಯಾಮಲಾ ಅವರು ಐತ್ತೂರು ಗ್ರಾ.ಪಂ. ಅಧ್ಯಕ್ಷರಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದರೂ ಮನಮೋಹನ್ ಗೋಳ್ಯಾಡಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿಯವರೊಂದಿಗೆ ಸೇರಿಕೊಂಡು ಅಧ್ಯಕ್ಷರ ಪದಚ್ಯುತಿಗೆ ಹುನ್ನಾರ ನಡೆಸಿದ್ದರು. ನ್ಯಾಯಾಲಯ ಅವಿಶ್ವಾಸ ನಿರ್ಣಯಕ್ಕೆ ತಡೆಯಾಜ್ಞೆ ನೀಡಿ ನ್ಯಾಯವನ್ನು ಎತ್ತಿ ಹಿಡಿದಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮನಮೋಹನ್ ಗೋಳ್ಯಾಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹ ವ್ಯಕ್ತವಾಗಿತ್ತು. ಕಾರ್ಯಕರ್ತರ ಆಶಯದಂತೆ ಅವರನ್ನು ಉಚ್ಛಾಟಿಸಬೇಕೆಂದು ನಿರ್ಣಯಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಜಿಲ್ಲಾಧ್ಯಕ್ಷರು ಪಕ್ಷದಿಂದ ಎಲ್ಲಾ ರೀತಿಯ ಪ್ರಯೋಜನ ಪಡೆದು, ಗೌರವ ಹಾಗೂ ಹುದ್ದೆಗಳನ್ನು ಅನುಭವಿಸಿ ಪಕ್ಷದ ವಿರುದ್ಧವೇ ಕೆಲಸ ಮಾಡಿರುವ ಮನಮೋಹನ್ ಗೋಳ್ಯಾಡಿ ಅವರನ್ನು ಉಚ್ಛಾಟಿಸುವಂತೆ ಸೂಚನೆ ನೀಡಿದ್ದಾರೆ ಎಂದು ಸುಧೀರ್‍ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬಳ್ಳೇರಿ, ಡಿಸಿಸಿ ಕಾರ್ಯದರ್ಶಿ ಸೈಮನ್ ಸಿ.ಜೆ., ಪ್ರಮುಖರಾದ ಸತೀಶ್ ನಾಯ್ಕ್ ಮೇಲಿನಮನೆ, ಶರೀಫ್ ಎ.ಎಸ್., ಸತೀಶ್ ಮೀನಾಡಿ ಉಪಸ್ಥಿತರಿದ್ದರು.