ಮುಂಡ್ಕೂರು : ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲವೆಂದು ಪಟ್ಟು ಹಿಡಿದ ಸ್ಥಳೀಯರು

ಮುಂಡ್ಕೂರು ಗ್ರಾಮ ಪಂಚಾಯತ್ 2022- 23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಇಲಾಖೆಯ ಸತೀಶ್ ನೋಡಲ್ ಅಧಿಕಾರಿಯಾಗಿದ್ದರು. ಸಂಕಲಕರಿಯದ ಉಗ್ಗೆದಬೆಟ್ಟು ಹಾಗೂ ಕೃಷ್ಣ ಬೆಟ್ಟು ನಿವಾಸಿಗಳ ನಡುವೆ ಮರಳುಗಾರಿಕೆ ಹಾಗೂ ರಸ್ತೆ ಅಗೆತದ ಬಗ್ಗೆ ಭಾರಿ ಮಾತಿನ ಚಕಮಕಿ ನಡೆಯಿತು. ಪಂಚಾಯತ್ ಮಾಜಿ ಸದಸ್ಯ ಸೋಮನಾಥ್ ಪೂಜಾರಿ ಉಗ್ಗೆದಬೆಟ್ಟು ನಿವಾಸಿಗಳ ಪರವಾಗಿ ಮಾತನಾಡಿ, ಶಾಂಭವಿ ನದಿಯಿಂದ ಪ್ರಕಾಶ ಸಪಳಿಗ ಎಂಬುವವರು ಮರಳು ಪರವಾನಿಗೆ ಮಾಡಿದ್ದು ಮರಳು ಸಾಗಾಟದ ವಾಹನಗಳಿಂದಾಗಿ ರಸ್ತೆ ಹಾಳಾಗುತ್ತಿರುವುದಲ್ಲದೆ, ರಸ್ತೆಯ ಬದಿಯಲ್ಲೇ ಅಂಗನವಾಡಿ ಕೇಂದ್ರ ಇರುವುದರಿಂದ ತೊಂದರೆಯಾಗುತ್ತಿದೆ.

ಈ ಕುರಿತು ಮರಳುಗಾರಿಕೆ ನಡೆಸಬಾರದು ಎಂದು ಪಂಚಾಯಿತಿಗೆ ಅನೇಕ ಬಾರಿ ಮನವಿಯನ್ನು ಕೂಡ ನೀಡಿದ್ದೇವೆ ಎಂದರು. ಮರಳು ಪರವಾನಿಗೆಯವರ ಪರವಾಗಿ ಕೃಷ್ಣಬೆಟ್ಟುವಿನ ರಿಚಾರ್ಡ್ ಮಾತನಾಡಿ, ನಾವು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿಲ್ಲ, ಪಂಚಾಯತ್ ಪರವಾನಿಗೆಯಿಂದ ಮರಳುಗಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಸೋಮನಾಥ ಪೂಜಾರಿ ಮಾತನಾಡಿ, ಯಾವುದೇ ಕಾರಣಕ್ಕೂ ಇಲ್ಲಿ ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಹಠ ಹಿಡಿದರು. ಮರಳು ಪರವಾನಿಗೆಯ ಬಗ್ಗೆ ತಾಲೂಕು ಸಮಿತಿಯಲ್ಲಿ ನಿರ್ಣಯಿಸಲಾಗುವುದು ಎಂದು ಪಂಚಾಯತ್ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ತಿಳಿಸಿದರು. ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಪರವ ಪಂಚಾಯತ್ ಸಿಬ್ಬಂದಿ ಮಲ್ಲಿಕಾ ಉಪಸ್ಥಿತರಿದ್ದರು.

Related Posts

Leave a Reply

Your email address will not be published.