ಕೆಲಸಗಳಲ್ಲಿ ಕಾರ್ಯಗತಗೊಳ್ಳಲು ಜ್ಞಾನ ಅಗತ್ಯ- ಧನಂಜಯ ರಾವ್

ಉಜಿರೆ: ಜೀವನದಲ್ಲಿ ಗೆಲುವು ಸಾಧಿಸಬೇಕಿದ್ದರೆ, ಮೊದಲು ಜ್ಞಾನದ ಸಂಪನ್ಮೂಲಗಳನ್ನು ತಿಳಿದುಕೊಂಡು, ಸಿಗುವ ಜ್ಞಾನವನ್ನು ನಿರ್ವಹಿಸಿ, ಕಾರ್ಯಗತಗೊಳಿಸಬೇಕು. ನಾವು ದುಡಿಯುವ ಹಣ ಇಂದು ಬಂದರೆ, ನಾಳೆಯ ದಿನ ಮತ್ತೆ ಖಾಲಿಯಾಗುತ್ತದೆ. ಆದರೆ, ನಾವು ಗಳಿಸುವ ಜ್ಞಾನ ನಮ್ಮ ಕೊನೆಯ ತನಕ ನಮ್ಮ ಮಸ್ತಕದಲ್ಲೇ ಇರುತ್ತದೆ ಎಂದು, ಬೆಳ್ತಂಗಡಿಯ ವಕೀಲರಾದ ರೊಟೇರಿಯನ್, ಧನಂಜಯ ರಾವ್ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎಸ್. ಡಿ. ಎಂ. ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಆಯೋಜಿಸಿದ್ದ ರಾಜ್ಯ ಮಟ್ಟದ ವೆಂಚುರಾ 22 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಓದುವ ವಿದ್ಯೆಯನ್ನು ಆನಂದಿಸಬೇಕು, ಅಷ್ಟೇ ಅಲ್ಲದೆ ನಾವು ಮಾಡುವ ಕೆಲಸಗಳನ್ನೂ ಆನಂದಿಸಬೇಕು. ನಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಎಲ್ಲರೂ ಹುಟ್ಟುತ್ತಲೇ ಒಂದೊಂದು ಪ್ರತಿಭೆಗಳನ್ನು ಹೊಂದಿರುತ್ತಾರೆ, ಆ ಪ್ರತಿಭೆಗಳನ್ನು ಬಳಸಿಕೊಂಡಾಗ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ಈ ಸಂದರ್ಭದಲ್ಲಿ ಎಸ್. ಡಿ. ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್. ಉದಯಚಂದ್ರ ಮಾತನಾಡಿ, ಆಸಕ್ತಿಯಿದ್ದಾಗಲೇ ಉತ್ತಮ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಚಿಂತನೆಗಳನ್ನು ಹೊಂದಿದ್ದಾಗ ಮಾತ್ರ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ಎಸ್. ಡಿ. ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ದೃತಿ ಕಾರ್ಯಕ್ರಮ ನಿರೂಪಿಸಿದರು. ಬಿ.ಬಿ.ಎ ವಿಭಾಗದ ಮುಖ್ಯಸ್ಥೆ ಶಕುಂತಲಾ ಸ್ವಾಗತಿಸಿ, ವಿದ್ಯಾರ್ಥಿನಿ ಇಂದಿರಾ ವಂದಿಸಿದರು.

Related Posts

Leave a Reply

Your email address will not be published.