ಸುರತ್ಕಲ್ ಟೋಲ್ ಕಾರ್ಮಿಕರಿಗೆ ಉದ್ಯೋಗ ನೀಡಿದ ಪ್ರತಿಭಾ ಕುಳಾಯಿ!
ಇಲ್ಲಿನ ಟೋಲ್ ಗೇಟ್ ನಲ್ಲಿ ಉದ್ಯೋಗದಲ್ಲಿದ್ದು ಟೋಲ್ ತೆರವು ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ 35 ಮಂದಿಗೆ ಕೆಲಸ ನೀಡುವುದಾಗಿ ಹೇಳಿದ್ದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು ತಮ್ಮನ್ನು ಸಂಪರ್ಕಿಸಿದ 19 ಮಂದಿಯಲ್ಲಿ ಹೆಚ್ಚಿನ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಪ್ರತಿಭಾ ಕುಳಾಯಿ ಅವರು, “ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡ 35 ಮಂದಿಯನ್ನು ನಾನು ಭೇಟಿಯಾಗಿ ಅವರಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದ್ದು ಅದರಂತೆ 22 ಮಂದಿ ನನ್ನನ್ನು ಭೇಟಿಯಾಗಿದ್ದು ಬಹುಪಾಲು ಯುವಕ-ಯುವತಿಯರಿಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಸೂಕ್ತ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಉದ್ಯೋಗ ಕಳೆದುಕೊಂಡವರಲ್ಲಿ ಒಬ್ಬ ವಿದ್ಯಾರ್ಥಿಯಾಗಿದ್ದು ಆತನ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಹಗಲು ಕೆಪಿಟಿಯಲ್ಲಿ ಕಲಿತು ರಾತ್ರಿ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ನನ್ನ ಕುಳಾಯಿ ಫೌಂಡೇಶನ್ ಮೂಲಕ ದತ್ತು ಪಡೆದು ಶಿಕ್ಷಣದ ಖರ್ಚು ವೆಚ್ಚ ನೋಡಿಕೊಳ್ಳುವ ಜೊತೆಗೆ ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದೇನೆ. ಇನ್ನೊಬ್ಬ ಮಹಿಳೆ ಟೋಲ್ ನಲ್ಲಿ ದುಡಿದು ತನ್ನ ಮಕ್ಕಳನ್ನು ಸಾಕುತ್ತಿದ್ದು ಆಕೆಗೆ ಸೂಕ್ತ ಉದ್ಯೋಗ ಕೊಡಿಸಿ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆಯಲಿದ್ದೇನೆ ಎಂದಿದ್ದಾರೆ.
ಟೋಲ್ ವಿರೋಧಿ ಹೋರಾಟ ಸಮಿತಿಯ ಜೊತೆಗೆ ಕಳೆದ ಏಳು ವರ್ಷಗಳಿಂದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಪ್ರತಿಭಾ ಕುಳಾಯಿ ಈ ಹಿಂದೆಯೇ ಟೋಲ್ ಉದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದನ್ನು ಸ್ಮರಿಸಬಹುದಾಗಿದೆ