ಬೈಂದೂರು : ತಾಲೂಕು ಆಡಳಿತ ಸೌಧ ವಿಶ್ವಕರ್ಮ ಜಯಂತಿ

ತಾಲೂಕು ಆಡಳಿತ ಸೌಧ ಬೈಂದೂರು, ತಾಲೂಕು ಪಂಚಾಯತ್ ಬೈಂದೂರು ವತಿಯಿಂದ ವಿಶ್ವಕರ್ಮ ಜಯಂತಿ ಬುಧವಾರ ಬೈಂದೂರು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆಯಿತು.
ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರ ಕಳಿ ಚಂದ್ರಯ್ಯ ಆಚಾರ್ಯ ವಿಶ್ವಕರ್ಮ ಜಯಂತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಜಯಂತಿಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೆ ಗುರುವಾದ, ದೇವಲೋಕ, ಸ್ವರ್ಗಲೋಕವನ್ನು ಹಾಗೂ ದೇವತೆಗಳಿಗೆ ವಾಹನಗಳನ್ನು ನಿರ್ಮಾಣ ಮಾಡಿ ಸೃಷ್ಟಿಕರ್ತ ಬ್ರಹ್ಮನಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ನುರಿತ ಗುರು ವಿಶ್ವಕರ್ಮ. ಅವರ ಪ್ರಾಮುಖ್ಯತೆ ಹಾಗೂ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.
ಬೈಂದೂರು ತಹಶೀಲ್ದಾರ್ ರಾಮಚಂದ್ರಪ್ಪಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಾನ್ ವಿಶ್ವಕರ್ಮನನ್ನು ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ, ಕುಶಲಕರ್ಮಿ ಮತ್ತು ಇಂಜಿನಿಯರ್ ಎಂದು ಪರಿಗಣಿಸಲಾಗಿದೆ. ಈ ದಿನದಂದು ವಿಶ್ವಕರ್ಮ ದೇವರನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಶ್ರಮ ಸಂಸ್ಕೃತಿಯ ಬದುಕಿಗೆ ವಿಶ್ವಕರ್ಮರ ತತ್ವ ಸದಾ ಅನುಕರಣೆ ಮತ್ತು ಅಭಿನಂದನೆ ಎಂದರು.
ನಿವೃತ್ತ ಶಿಕ್ಷಕ ಕೆ. ಸಂಜೀವ ಆಚಾರ್ಯ ಕಳವಾಡಿ, ಹಿರಿಯ ಕಾಷ್ಠಶಿಲ್ಪಿ ಸಂಸಾಡಿ ನಾರಾಯಣ ಆಚಾರ್ಯ ಇವರು ಬೈಂದೂರು ತಹಶೀಲ್ದಾರ್ ಕಚೇರಿ ಹಾಗೂ ಬೈಂದೂರು ತಾಲೂಕು ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, ಉಪ್ರಳ್ಳಿ ಕಾಳಿಕಾಂಬಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರಕರ್, ಬೈಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಸ್ವಾಗತಿಸಿದರು. ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ ಪ್ರಸ್ತಾವಿಕ ಮಾತನಾಡಿದರು. ಅಶೋಕ್ ಆಚಾರ್ಯ ನಾವುಂದ ಹಾಗೂ ಶ್ರೀಧರ್ ಆಚಾರ್ಯ ಮರವಂತೆ ಇವರು ಸನ್ಮಾನ ಪತ್ರ ವಾಚಿಸಿದರು. ನಾಗರಾಜ್ ಆಚಾರ್ಯ ಬಿಜೂರು ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಆಚಾರ್ಯ ತಲ್ಲೂರು ವಂದಿಸಿದರು.
