ವಿಶ್ವ ಆರೋಗ್ಯ ದಿನಾಚರಣೆ : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಆರೋಗ್ಯ ಜಾಗೃತಿ ಮತ್ತು ಅರಿವು

ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಏಪ್ರಿಲ್ 6 ರ ಗುರುವಾರದಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆರೋಗ್ಯ ಜಾಗೃತಿ ಮತ್ತು ಅರಿವು ಮೂಡಿಸುವ ಶಿಲ್ಪ ಅನಾವರಣ ಮತ್ತು ಉಚಿತ ಆರೋಗ್ಯ ತಪಾಸಣೆ ಜರುಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಸರ್ವಲೆನ್ಸ್ ಆಫೀಸರ್ ಡಾ. ನಾಗರತ್ನ ಅವರು, “ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಉತ್ತಮ ಆರೋಗ್ಯದ ಕುರಿತು ಅರಿವು ಮೂಡಿಸುವುದಾಗಿದೆ. ಮೊದಲು ಸೋಂಕು ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇತ್ತು. ಆದರೆ ಈಗ ಅಸಾಂಕ್ರಾಮಿಕ ಮತ್ತು ಜೀವನಶೈಲಿಯಿಂದ ಬರುವ ಕಾಯಿಲೆಗಳು, ಮಧುಮೇಹ, ಹೃದ್ರೋಗ, ಕಿಡ್ನಿ ಇತ್ಯಾದಿಗಳ ತಡೆಗಟ್ಟುವ ಮಾಹಿತಿ ಮತ್ತು ಅರಿವು ಮೂಡಿಸುವ ಅವಶ್ಯಕತೆ ಇದೆ. ಇಂತಹ ಕಾರ್ಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಯಾವಾಗಲೂ ಮುಂಚೂಣಿಯಲ್ಲಿದೆ” ಎಂದು ತಿಳಿಸಿದರು . ಇಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸಮುದಾಯ ಆರೋಗ್ಯ ವಿಭಾಗದ ತಂಡದವರು ರಚಿಸಿರುವ ಆರೋಗ್ಯ ಜಾಗೃತಿ ಮತ್ತು ಅರಿವು ಮೂಡಿಸುವ ಶಿಲ್ಪ ಅನಾವರಣಗೊಳಿಸಿ ಅವರು ಮಾತನಾಡಿದರು.

ಈ ವರ್ಷದ ಘೋಷವಾಕ್ಯ “ಎಲ್ಲರಿಗೂ ಆರೋಗ್ಯ” ಎಂಬುದಾಗಿದೆ ಇದನ್ನು ಕೇಂದ್ರೀಕರಿಸುವುದರ ಜೊತೆಗೆ, ವಿಶ್ವ ಅರೋಗ್ಯ ಸಂಸ್ಥೆಯು ತನ್ನ 75 ನೇ ವಾರ್ಷಿಕೋತ್ಸವವನ್ನು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ 75 ವರ್ಷಗಳ ವಿಷಯದ ಅಡಿಯಲ್ಲಿ ಆಚರಿಸುತ್ತಿದೆ.ಇದರ ಅಂಗವಾಗಿ ಇಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಬೆಳಗ್ಗಿನಿಂದ ಆರೋಗ್ಯ ಜಾಗೃತಿ ಮೂಡಿಸುವ ಭಾಗವಾಗಿ ವಿವಿಧ ತಂಡಗಳಿಂದ ಬೀದಿ ನಾಟಕವನ್ನು ಏರ್ಪಡಿಸಲಾಗಿತ್ತು . ಅಲ್ಲದೇ ಆಸ್ಪತ್ರೆಯ ಉದ್ಯೋಗಿಗಳಿಗೆ ಆರೋಗ್ಯದ ಕುರಿತು ಘೋಷ ವಾಕ್ಯ ರಚನಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕೆ ಎಂ ಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ್ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಶಿರನ್ ಶೆಟ್ಟಿ, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್, ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಡಾ. ಶುಭ ಸೂರಿಯ ಮತ್ತು ಆಡಳಿತ ವೃಂದದವರು ಉಪಸ್ಥಿತರಿದ್ದರು. ಸುಮಾರು 1000 ಕ್ಕೂ ಹೆಚ್ಚು ಜನರು ಉಚಿತ ಅರೋಗ್ಯ ತಪಾಸಣೆಯ ಪ್ರಯೋಜನ ಪಡೆದರು.

Related Posts

Leave a Reply

Your email address will not be published.