ಪರೀಕ್ಷಾ ಮುನ್ನಾ ದಿನವೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಾಪತ್ತೆ. ನದಿಯಲ್ಲಿ ಶವ ಪತ್ತೆ

ಕಡಬ ಖಾಸಗಿ ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೋಡಿಂಬಾಳ ಗುಂಡಿಮಜಲು ನಿವಾಸಿ ಪರಿಕ್ಷಾ ಮುನ್ನಾ ದಿನವೇ ನಾಪತ್ತೆಯಾಗಿದ್ದು, ಗುರುವಾರ ಕೋಡಿಂಬಾಳ ಸಮೀಪದ ಕುಮಾರಾಧಾರ ನದಿಯ ನಾಕೂರ ಗಯದಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಮಂಜುನಾಥ ಶೆಟ್ಟಿ ಅವರ ಪತ್ರ ಅದ್ವೆತ್ ಶೆಟ್ಟಿ ಮೃತಪಟ್ಟ ಬಾಲಕ, ಈತ ಕಡಬ ಖಾಸಗಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದು, ಕಲಿಕೆಯಲ್ಲಿ ಸ್ವಲ್ಪ ಹಿಂದೆ ಇದ್ದ, ಇದೇ ಕಾರಣಕ್ಕೆ ಆತ ಕಡಬದ ಟುಟೋರಿಯಲ್ ಒಂದರಲ್ಲಿ ಟ್ಯೂಷನ್ ಪಡೆಯುತ್ತಿದ್ದ. ಇಷ್ಟಾದರೂ ಕಲಿಕೆಯಲ್ಲಿ ಅಷ್ಟೊಂದು ಸುಧಾರಣೆ ಕಂಡಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಆತ ಪರೀಕ್ಷೆಗೆ ಹೆದರಿ ಮನೆಯಿಂದ ಬುಧವಾರ ಸಂಜೆ ನಾಪತ್ತೆಯಾಗಿದ್ದ ಎಂದು ಹೇಳಲಾಗಿದೆ. . ಮನೆಯವರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ತಡರಾತ್ರಿ ತನಕ ಆತನಿಗಾಗಿ ಹುಡುಕಾಡಿದ್ದರು. ಆದರೂ ಪತ್ತೆಯಾಗಿರಲಿಲ್ಲ.

ಸಂಜೆ ಹೊತ್ತು ಕಡಬ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಬಾಲಕನನ್ನು ಪೇಟೆಯಾದ್ಯಂತ ಹಾಗೂ ಕಡಬ , ಸುಬ್ರಹ್ಮಣ್ಯ, ಮರ್ಧಾಳ ಮುಂತಾದೆಡೆ ಹುಡುಕಾಟ ಮಾಡಲಾಗಿತ್ತು ಆದರೆ ಪ್ರಯೋಜನವಾಗಿರಲಿಲ್ಲ. ಸಂಜೆ ಕಡಬ ಪೇಟೆಯಿಂದ ನೇರ ಕೋಡಿಂಬಾಳಕ್ಕೆ ಬಂದ ಬಾಲಕ ರೈಲ್ವೇ ಹಳಿಯಲ್ಲಿ ನಡೆದು ರೈಲ್ವೇ ಸೇತುವೆ ದಾಟಿ ನದಿಯ ಆಚೆ ಬದಿಯಲ್ಲಿ ಪವಿತ್ರವಾದ ನಾಕೂರು ಗಯದ ಬದಿಯಲ್ಲಿ ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿದ್ದ ಶೆಡ್ ಒಂದರಲ್ಲಿ ತನ್ನ ಬ್ಯಾಗನ್ನು ಇಟ್ಟು ನದಿಗೆ ಹಾರಿದ್ದಾನೆ. ಸ್ಥಳೀಯರೊಬ್ಬರು ನದಿಗೆ ತಮ್ಮ ತೋಟಕ್ಕೆ ನೀರು ಹಾಯಿಸುವ ಪಂಪು ಚಾಲು ಮಾಡಲು ಬಂದ ವೇಳೆ ಶೆಡ್‌ನಲ್ಲಿ ಶಾಲಾ ಬ್ಯಾಗ್ ಇರುವುದನ್ನು ಕಂಡಿದ್ದರು. ಅಷ್ಟೊತ್ತಿಗಾಗಲೇ ಬಾಲಕ ನಾಪತ್ತೆಯಾಗಿರುವ ವಿಚಾರ ಊರೆಲ್ಲಾ ಹಬ್ಬಿರುವುದರಿಂದ ಸ್ಥಳೀಯ ವ್ಯಕ್ತಿ ತಕ್ಷಣ ಸಂಬAಧಪಟ್ಟವರಿಗೆ ಬ್ಯಾಗ್ ಇರುವ ವಿಚಾರವನ್ನು ತಿಳಿಸಿದ್ದಾರೆ. ಬಾಲಕ ನದಿಗೆ ಹಾರಿರುವುದನ್ನು ಖಚಿತಪಡಿಸಿಕೊಂಡ ಸಾರ್ವಜನಿಕರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಶುರು ಮಾಡಿದ ತಕ್ಷಣ ನದಿಯ ಒಂದು ಬದಿಯಲ್ಲೇ ಶವ ಪತ್ತೆಯಾಯಿತು. ನದಿಯ ಈ ಭಾಗ ಎಡಮಂಗಳ ಗ್ರಾಮಕ್ಕೆ ಸೇರಿರುವುದರಿಂದ ಬೆಳ್ಳಾರೆ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಡಬದಲ್ಲಿ ಸೇವಾ ಸಿಂಧು ಹಾಗೂ ಟೈಲರಿಂಗ್ ತರಬೇತಿ ನಡೆಸುತ್ತಿರುವ ಮಂಜುನಾಥ ಶೆಟ್ಟಿ ಹಾಗೂ ಶಶಿಕಲಾ ಶೆಟ್ಟಿ ಅವರಿಗೆ ಒಂದು ಹೆಣ್ಣು ಹಾಗೂ ಓರ್ವ ಪುತ್ರ , ಇದೀಗ ಏಕೈಕ ಪುತ್ರನನ್ನು ಕಳೆದುಕೊಂಡ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.