ಕಿಟೆಲರ ತುಳು ಒಡನಾಟ’ : ವಿಚಾರಗೋಷ್ಠಿ ಮತ್ತು ಸಾಕ್ಷ್ಯ ಚಿತ್ರ ಪ್ರದರ್ಶನ
ಮಂಗಳೂರು: ತುಳು ಭಾಷೆ ಮತ್ತು ತುಳುನಾಡಿನೊಂದಿಗೆ ಕಿಟೆಲ್ ಅವರ ಒಡನಾಟದ ಬಗ್ಗೆ ಹೊಸ ಬೆಳಕು ಚೆಲ್ಲುವ ವಿಚಾರ ಮಂಥನ ಕಾರ್ಯಕ್ರಮ ನ.22ರ ಶನಿವಾರದಂದು ಬೆಳಿಗ್ಗೆ 10:00 ಗಂಟೆಗೆ ಮಂಗಳೂರಿನ ಊರ್ವ ಸ್ಟೋರ್ ನಲ್ಲಿರುವ ತುಳು ಭವನದಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಸುದೀರ್ಘ ಕಾಲ ಅಧ್ಯಯನ ಹಾಗೂ ಕ್ಷೇತ್ರಕಾರ್ಯ ಮಾಡಿ ಕನ್ನಡದ ನಿಘಂಟು ರೂಪಿಸಿದ ರೆವೆರೆಂಡ್ ಫರ್ಡಿನೆಂಡ್ ಕಿಟೆಲ್ ಅವರ ತುಳುನಾಡಿನ ಜೊತೆಗಿನ ಮತ್ತು ತುಳು ಭಾಷೆಯ ಒಡನಾಟದ ಬಗ್ಗೆ ‘ಅರಿವು ಮತ್ತು ಗುರುವು’ ಸಾಕ್ಷ್ಯ ಚಿತ್ರದ ನಿರ್ದೇಶಕ ಪ್ರಶಾಂತ್ ಪಂಡಿತ್ ವಿಚಾರ ಮಂಡನೆ ನಡೆಸುವರು. ತುಳು ಸಂಶೋಧಕರಾದ ಬೆನೆಟ್ ಅಮ್ಮಣ್ಣ ಪ್ರತಿಕ್ರಿಯೆ ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸುವರು. ವಿಚಾರ ಮಂಥನದ ಬಳಿಕ ಕಿಟೆಲ್ ಅವರ ಬದುಕಿನ ಬಗ್ಗೆ ಪ್ರಶಾಂತ್ ಪಂಡಿತ್ ಅವರು ನಿರ್ಮಿಸಿರುವ ‘ಅರಿವು ಮತ್ತು ಗುರುವು’ ಸಾಕ್ಷ್ಯ ಚಿತ್ರದ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.


















